ADVERTISEMENT

ಬೇಡಿಕೆ ಈಡೇರದೆ ಸತ್ತರೂ ಹಿಂದಿರುಗಲ್ಲ: ಪ್ರತಿಭಟನಾ ನಿರತ ರೈತರ ಪಟ್ಟು

ರಾಯಿಟರ್ಸ್
Published 21 ಡಿಸೆಂಬರ್ 2020, 14:52 IST
Last Updated 21 ಡಿಸೆಂಬರ್ 2020, 14:52 IST
ದೆಹಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ – ಪಿಟಿಐ ಚಿತ್ರ
ದೆಹಲಿಯ ಸಿಂಘು ಗಡಿಯಲ್ಲಿ ರೈತರ ಪ್ರತಿಭಟನೆ – ಪಿಟಿಐ ಚಿತ್ರ   

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಪಟ್ಟು ಸಡಿಲಿಸಿಲ್ಲ. ಕನಿಷ್ಠ ತಾಪಮಾನ 2–3 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾದರೂ ಮೈಕೊರೆಯುವ ಚಳಿಯಲ್ಲಿಯೂ ರೈತರ ಪ್ರತಿಭಟನೆ ಮುಂದುವರೆದಿದೆ.

‘ಈ ಹವಾಮಾನದಲ್ಲಿ ಇಲ್ಲಿ ಠಿಕಾಣಿ ಹೂಡುವುದು ತುಂಬಾ ಕಷ್ಟ ಎಂದು ಪಂಜಾಬ್‌ನ ಪಟಿಯಾಲ ಜಿಲ್ಲೆಯ ವೃದ್ಧ ಬಲ್‌ಬೀರ್ ಸಿಂಗ್ ಹೇಳಿದ್ದಾರೆ. ನಮ್ಮ ಬೇಡಿಕೆಗಳು ಈಡೇರುವವರೆಗೆ ನಾವಿಲ್ಲಿಂದ ಹಿಂದಿರುಗುವುದಿಲ್ಲ. ನಾವಿಲ್ಲೇ ಸತ್ತರೂ ಸರಿ, ನಾವು ಹಿಂದಿರುಗಲಾರೆವು ಎಂದು ಅವರು ಹೇಳಿದ್ದಾರೆ.

ಪ್ರತಿಭಟನಾ ನಿರತ ರೈತರ ಪೈಕಿ ಸುಮಾರು 30 ಮಂದಿ ಈವರೆಗೆ ಚಳಿಯೂ ಸೇರಿದಂತೆ ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ. ತೀವ್ರ ಚಳಿ, ಪ್ರತಿಕೂಲ ಹವಾಮಾನ ರೈತರನ್ನು ಕಂಗೆಡಿಸಿದೆ. ಪ್ರತಿಭಟನೆ ಸ್ಥಳದ ಸಮೀಪ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಸುಮಾರು ಹತ್ತು ಮಂದಿ ಮೃತಪಟ್ಟಿದ್ದಾರೆ.

‘ಈ ಪ್ರತಿಭಟನೆಯಲ್ಲಿ ಇನ್ನಷ್ಟು ಜನ ಸಾಯುವುದು ನಮಗೆ ಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಶೀಘ್ರದಲ್ಲೇ ಹೊಸ ಕೃಷಿ ಕಾನೂನುಗಳನ್ನು ಹಿಂಪಡೆಯಲಿದ್ದಾರೆ ಎಂಬುದಾಗಿ ಭಾವಿಸಿದ್ದೇವೆ’ ಎಂದು 76 ವರ್ಷ ವಯಸ್ಸಿನ ರೈತ ಪಾಘ್ ಸಿಂಗ್ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ. ಮೋದಿ ಅವರು ನಮ್ಮ ಮಾತನ್ನು ಕೇಳಬೇಕು ಎಂದು ಅವರು ಹೇಳಿದ್ದಾರೆ.

‘ನಾನು ಚಳಿಗೆ ಹೆದರುವುದಿಲ್ಲ. ಅದು ಚಳಿಯಿರಲಿ, ಪ್ರಧಾನಿ ಮೋದಿಯೇ ಇರಲಿ ನಾನು ಹೆದರಲಾರೆ. ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೆ ನಮ್ಮ ಕಷ್ಟ ಮುಗಿಯುವುದಿಲ್ಲ’ ಎಂದು ಸರುಮಿಂದರ್ ಸಿಂಗ್ ಎಂಬುವವರು ಹೇಳಿದ್ದಾರೆ.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನಗಳ ಹತ್ತಾರು ಸಾವಿರ ರೈತರು ಸುಮಾರು ನಾಲ್ಕು ವಾರಗಳಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.