ADVERTISEMENT

'ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿತ್ತು, ಗೃಹ ಸಚಿವರು ಸುಳ್ಳು ಹೇಳುತ್ತಿದ್ದಾರೆ'

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 5:23 IST
Last Updated 7 ಆಗಸ್ಟ್ 2019, 5:23 IST
   

ನವದೆಹಲಿ: ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ, ನನ್ನನ್ನು ಗೃಹ ಬಂಧನದಲ್ಲಿರಿಸಲಾಗಿತ್ತು.ಗೃಹ ಸಚಿವರೊಬ್ಬರು ಈ ರೀತಿ ಸುಳ್ಳು ಹೇಳುತ್ತಿರುವುದು ನೋಡಿ ಬೇಸರವಾಗುತ್ತಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ, ಜಮ್ಮುು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಮಸೂದೆ ಬಗ್ಗೆ ಚರ್ಚೆಯಾಗುತ್ತಿದಾಗ, ಫರೂಕ್ ಅಬ್ದುಲ್ಲಾ ಅವರು ಎಲ್ಲಿದ್ದಾರೆ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕಿಸುಪ್ರಿಯಾ ಸುಳೆ ಪ್ರಶ್ನಿಸಿದ್ದರು.ಇದಕ್ಕೆ ಉತ್ತರಿಸಿದ ಅಮಿತ್ ಶಾ, ಅವರನ್ನು ಬಂಧಿಸಿಲ್ಲ, ಗೃಹ ಬಂಧನದಲ್ಲೂ ಇಟ್ಟಿಲ್ಲ, ಅವರು ಅವರಿಚ್ಛೆಯಂತೆ ಮನೆಯಲ್ಲಿದ್ದಾರೆ ಎಂದು ಉತ್ತರಿಸಿದ್ದರು.

ಸೋಮವಾರ ಶ್ರೀನಗರದಲ್ಲಿ ಎನ್‌ಡಿಟಿವಿ ಜತೆ ಮಾತನಾಡಿದ ಫರೂಕ್ ಅಬ್ದುಲ್ಲಾ, ನನ್ನ ರಾಜ್ಯ ಹೊತ್ತಿ ಉರಿಯುತ್ತಿರುವಾಗ, ನನ್ನ ಜನರನ್ನು ಜೈಲಿಗಟ್ಟುತ್ತಿರುವಾಗ ನಾನು ನನ್ನಿಚ್ಛೆಯಂತೆ ಮನೆಯೊಳಗೆ ಯಾಕೆ ಕುಳಿತುಕೊಳ್ಳಲಿ? ನಾನು ನಂಬಿರುವ ಭಾರತ ಇದಲ್ಲ ಎಂದು ಹೇಳುತ್ತಾ ಭಾವುಕರಾಗಿದ್ದಾರೆ.

ADVERTISEMENT

ಇಲ್ಲಿಯವರೆಗೆ ಗೃಹ ಬಂಧನದಲ್ಲಿದ್ದು ಹೊರಗೆ ಹೇಗೆ ಬಂದಿರಿ?ಎಂದು ಮಾಧ್ಯಮ ಪ್ರತಿನಿಧಿ ಕೇಳಿದಾಗ, ನನ್ನನ್ನು ಬಂಧಿಸಿಲ್ಲ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಹೀಗಿರುವಾಗ ನನ್ನನ್ನು ಬಂಧನದಲ್ಲಿಡಲು ನೀನ್ಯಾರು ಎಂದು ನಾನು ಭದ್ರತಾಸಿಬ್ಬಂದಿಗೆ ಕೇಳಿದೆ ಎಂದಿದ್ದಾರೆ.ಈ ಕಾರಣಕ್ಕಾಗಿ ನನ್ನ ಎಷ್ಟು ಭದ್ರತಾ ಸಿಬ್ಬಂದಿಗಳನ್ನು ವಜಾ ಮಾಡಿದ್ದಾರೆ ಎಂದು ಗೊತ್ತಿಲ್ಲ ಎಂದಿದ್ದಾರೆ ಫರೂಕ್ ಅಬ್ದುಲ್ಲಾ.

ಕಾಶ್ಮೀರಕ್ಕೆ ನೀಡಿರುವ ವಿಶೇಷಾಧಿಕಾರ ರದ್ದು ಮಾಡುವ ತೀರ್ಮಾನ ಕೈಗೊಳ್ಳುವ ಮುನ್ನ ಕೇಂದ್ರ ಸರ್ಕಾರ, ಜಮ್ಮು ಕಾಶ್ಮೀರದ ಪ್ರಧಾನ ನಾಯಕರನ್ನು ಗೃಹ ಬಂಧನದಲ್ಲಿರಿಸಿದ ಬಗ್ಗೆ ವಿಪಕ್ಷಗಳು ಸಂಸತ್ತಿನಲ್ಲಿ ಪ್ರಶ್ನಿಸಿದ್ದವು.ಭಾನುವಾರ ಕಾಶ್ಮೀರದಮಾಜಿ ಮುಖ್ಯ ಮುಖ್ಯಮಂತ್ರಿಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರನ್ನು ಗೃಹಬಂಧನದಲ್ಲಿಡಲಾಗಿತ್ತು. ಸೋಮವಾರ ಇವರನ್ನು ಅಧಿಕೃತವಾಗಿ ಬಂಧನದಲ್ಲಿರಿಸಿದ್ದು, ಇವರನ್ನು ಬಿಡುಗಡೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಇಲ್ಲಿವರೆಗೆ ಮಾತೆತ್ತಿಲ್ಲ.

ಕೇಂದ್ರ ಸರ್ಕಾರದ ಈ ನಡೆ ಬಗ್ಗೆ ಮಾತನಾಡುವಾಗ ಕಣ್ಣೀರಿಟ್ಟ ಫರೂಕ್ ಅಬ್ದುಲ್ಲಾ, ಅವರು ಪ್ರಾಂತ್ಯಗಳಾಗಿ ವಿಭಜಿಸಿದರು, ಇನ್ನು ಅವರು ಹೃದಯಗಳನ್ನೂ ವಿಭಜಿಸುವರೇ? ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸುವರೇ?ನನ್ನ ಭಾರತ ಎಲ್ಲರದ್ದೂ ಎಂದು ನಾನು ನಂಬಿದ್ದೆ. ಜಾತ್ಯಾತೀತ ಮತ್ತು ಒಗ್ಗಟ್ಟಿನಲ್ಲಿ ನಂಬಿಕೆ ಇಟ್ಟವರ ದೇಶ ಎಂದು ನಂಬಿದ್ದೆ ಎಂದು ಕಣ್ಣೀರಿಟ್ಟಿದ್ದಾರೆ.

ಈ ರಾಜ್ಯಕ್ಕೆ ವಿಶೇಷಾಧಿಕಾರ ಕೊಟ್ಟಿದ್ದು ಚಿಕ್ಕ ವಿಷಯವೇನೂ ಅಲ್ಲ, ಅದೊಂದು ಸಾಮಾನ್ಯ ಸಂಗತಿಯೂ ಅಲ್ಲ.ನೆಹರೂನಂತ ನಾಯಕರು ನಮಗೆ ಸವಲತ್ತು ಕೊಟ್ಟಿದ್ದು. ಇದಕ್ಕೊಂದು ತಾರ್ಕಿಕ ಅಂತ್ಯ ಕಂಡುಕೊಳ್ಳಬೇಕಿದೆ. ನಾವು ಬಿಟ್ಟುಕೊಡಲಾರೆವು ಎಂದಿದ್ದಾರೆ ಅಬ್ದುಲ್ಲಾ.

ಭಾರೀ ಭದ್ರತೆಯೊದಗಿಸಿರುವ ಜಮ್ಮು ಕಾಶ್ಮೀರದ ಹಲವು ಭಾಗಗಳಲ್ಲಿ ಇಂಟರ್ನೆಟ್, ದೂರವಾಣಿ ಸೇವೆ ಸ್ಥಗಿತಗೊಳಿಸಲಾಗಿದೆ.ಸಾರ್ವಜನಿಕ ರ‍್ಯಾಲಿಮತ್ತು ಸಭೆಗಳಿಗೂ ನಿರ್ಬಂಧ ಹೇರಲಾಗಿದೆ.

ಸಾಮಾನ್ಯ ವ್ಯಕ್ತಿಯೊಬ್ಬನ ಬದುಕಿನಲ್ಲಿ ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದಕ ಬಗ್ಗೆ ನನಗೆ ಚಿಂತೆಯಾಗಿದೆ . ಬಂಧಿತರಾಗಿರಿಸಿದರೆ ಅವರಿಗೆ ಆಹಾರ, ಔಷಧಿ ನೀಡುವವರಾರು? ನಾವು ಕಷ್ಟ ಸುಖಗಳಲ್ಲಿಸದಾ ನಿಮ್ಮೊಂದಿಗೆ ಇದ್ದೆವು. ನಮ್ಮ ಕಷ್ಟ ಸುಖಗಳಲ್ಲಿಯೂನೀವು ನಮ್ಮೊಂದಿಗೆ ಇರುತ್ತೀರಿ ಎಂದು ಭಾವಿಸಿದ್ದೀನಿ. ಪ್ರಜಾಪ್ರಭುತ್ವ, ಜಾತ್ಯಾತೀತ ವ್ಯವಸ್ಥೆ ನಮ್ಮ ದೇಶದಲ್ಲಿ ಮರಳಿ ಬರಲಿ ಎಂದು ಪ್ರಾರ್ಥಿಸಿ ಎಂಬ ಸಂದೇಶವನ್ನು ನಾನು ನನ್ನರಾಜ್ಯದ ಜನರಿಗೆ ಮತ್ತು ದೇಶದ ಜನರಿಗೆ ನೀಡಲು ಬಯಸುತ್ತಿದ್ದೇನೆ ಎಂದು ಫರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.