ADVERTISEMENT

ಒಬಿಸಿ ಮೀಸಲು ಮೇಲ್ಮನವಿ ಆಯ್ಕೆ ಮುಕ್ತ: ಮಹಾರಾಷ್ಟ್ರ ಸರ್ಕಾರ

ಪಿಟಿಐ
Published 5 ಮಾರ್ಚ್ 2021, 12:01 IST
Last Updated 5 ಮಾರ್ಚ್ 2021, 12:01 IST
ಅಜಿತ್ ಪವಾರ್
ಅಜಿತ್ ಪವಾರ್   

ಮುಂಬೈ: ಸ್ಥಳೀಯ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ನೀಡುವ ಮೀಸಲಾತಿ ಒಳಗೊಂಡು ಮೀಸಲು ಪ್ರಮಾಣ ಶೇ 50 ಮೀರಬಾರದು ಎಂಬ ಸುಪ್ರೀಂ ಕೋರ್ಟ್‌ನ ಆದೇಶ ಕುರಿತು ಮೇಲ್ಮನವಿ ಸಲ್ಲಿಸುವ ಆಯ್ಕೆಯನ್ನು ಸರ್ಕಾರ ಹೊಂದಿದೆ ಎಂದು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಶುಕ್ರವಾರ ವಿಧಾನಸಭೆಯಲ್ಲಿ ತಿಳಿಸಿದರು.

ಸುಪ್ರಿಂ ಕೋರ್ಟ್‌ ಗುರುವಾರ ಈ ಕುರಿತು ಆದೇಶ ನೀಡಿದ ಸಂದರ್ಭದಲ್ಲಿ ಮಹಾರಾಷ್ಟ್ರದ ಕಾಯ್ದೆಯನ್ನೂ ಉಲ್ಲೇಖಿಸಿತ್ತು.

ಶುಕ್ರವಾರ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವಿಸ್‌, ‘ಸುಪ್ರೀಂ ಕೋರ್ಟ್‌ ಆದೇಶ ಒಬಿಸಿ ವರ್ಗದ ಮೇಲೆ ಪರಿಣಾಮ ಬೀರಲಿದೆ‘ ಎಂದು ಗಮನಸೆಳೆದರು.

ADVERTISEMENT

ಸರ್ಕಾರ ಒಬಿಸಿ ಕೋಟಾ ವಿಷಯವನ್ನು ಕಡೆಗಣಿಸುತ್ತಿದೆ. ನ್ಯಾಯಾಂಗ ಆಯೋಗವನ್ನು ರಚಿಸಿಲ್ಲ. ಕೊರೊನಾ ಸೋಂಕು ಪರಿಸ್ಥಿತಿಯನ್ನು ಉಲ್ಲೇಖಿಸಿ ಮೇಲ್ಮನವಿ ಸಲ್ಲಿಸಬೇಕು. ಸದ್ಯ, ಈ ಆದೇಶಕ್ಕೆ ತಡೆಯಾಜ್ಞೆ ತರಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಜಿತ್‌ ಪವಾರ್ ಅವರು, ‘ಸುಪ್ರೀಂ ಕೋರ್ಟ್‌ನ ಆದೇಶವು ಕೇವಲ ಧುಲೆ, ನಂದುರ್‌ಬರ್, ನಾಗಪುರ, ಅಕೋಲಾ, ವಾಶಿಂ, ಭಂಡಾರ, ಗೊಂಡಿಯಾ ಜಿಲ್ಲೆಗಳಿಗಷ್ಟೇ ಅನ್ವಯವಾಗಲಿದೆ’ ಎಂದು ಪ್ರತಿಪಾದಿಸಿದರು.

ಮುಖ್ಯಮಂತ್ರಿಗಳು ಸಂಪುಟ ಸಚಿವರ ಜೊತೆಗೆ ಈ ವಿಷಯ ಕುರಿತು ಗುರುವಾರ ಸಂಜೆಯೇ ಚರ್ಚಿಸಿದ್ದಾರೆ. ಒಬಿಸಿ ಮೀಸಲು ಕುರಿತಂತೆ ಮಹಾರಾಷ್ಟ್ರ ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.