ADVERTISEMENT

ಅದಾನಿ ಸಮೂಹ ವಿರುದ್ಧದ ತನಿಖೆ ವಿಳಂಬವೇಕೆ: ಇಂಧನ ಇಲಾಖೆಯ ಮಾಜಿ ಕಾರ್ಯದರ್ಶಿ ಶರ್ಮಾ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 15:46 IST
Last Updated 26 ಜನವರಿ 2026, 15:46 IST
ಗೌತಮ್‌ ಅದಾನಿ
ಗೌತಮ್‌ ಅದಾನಿ   

ಹೈದರಾಬಾದ್‌: ಸೌರ ವಿದ್ಯುತ್‌ ಗುತ್ತಿಗೆ ಪಡೆಯಲು ಲಂಚ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅದಾನಿ ಸಮೂಹದ ಗೌತಮ್ ಅದಾನಿ ವಿರುದ್ಧ ಸಮಗ್ರ ನ್ಯಾಯಾಂಗ ತನಿಖೆ ನಡೆಸಲು ಕೇಂದ್ರ ಸರ್ಕಾರ ಏಕೆ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ಇಂಧನ ಸಚಿವಾಲಯದ ಮಾಜಿ ಕಾರ್ಯದರ್ಶಿಯೂ ಆದ ನಿವೃತ್ತ ಐಎಎಸ್‌ ಅಧಿಕಾರಿ ಇಎಎಸ್‌ ಶರ್ಮಾ ಪ್ರಶ್ನಿಸಿದ್ದಾರೆ.

ಲಂಚ ಪ್ರಕರಣದಲ್ಲಿ ಗೌತಮ್ ಅದಾನಿ ವಿರುದ್ಧ ಅಮೆರಿಕದ ಸೆಕ್ಯುರಿಟೀಸ್‌ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಜಾರಿಗೊಳಿಸಿರುವ ಸಮನ್ಸ್‌ ಅನ್ನು ಅದಾನಿ ಅವರಿಗೆ ತಲುಪಿಸಲು ಭಾರತದ ಕಾನೂನು ಸಚಿವಾಲಯ ನಿರಾಕರಿಸಿದೆ ಎಂಬ ವರದಿಗಳ ಬೆನ್ನಲ್ಲೆ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. 

ಈ ಸಂಬಂಧ ಕೇಂದ್ರ ಸಂಪುಟ ಕಾರ್ಯದರ್ಶಿ ಟಿ.ವಿ.ಸೋಮನಾಥನ್‌ ಅವರಿಗೆ ಪತ್ರ ಬರೆದಿರುವ ಅವರು, ಸರ್ಕಾರದ ಮೌನ ನಡೆಯನ್ನು ಪ್ರಶ್ನಿಸಿದ್ದಾರೆ. ‘ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ತನಿಖೆಗೆ ಅಗತ್ಯವಿರುವ ಪುರಾವೆಗಳನ್ನು ಪಡೆಯಲು ಅಮೆರಿಕದ ‘ಎಸ್‌ಇಸಿ’ ಅನ್ನು ಸಂರ್ಪಕಿಸಬಹುದಿತ್ತು. ಆದರೆ, ಅದು ಹಾಗೆ ಮಾಡಿಲ್ಲ. ಸಿಬಿಐ ಸಹ ವಿವರಗಳಿಗಾಗಿ ಅಮೆರಿಕದ ಎಫ್‌ಬಿಐ ಅನ್ನು ಸಂಪರ್ಕಿಸಬಹುದಿತ್ತು ಮತ್ತು ತನ್ನದೇ ಆದ ತನಿಖೆಯನ್ನೂ ಪ್ರಾರಂಭಿಸಬಹುದಿತ್ತು. ಆದರೆ ಅದೂ ಸಹ ಈ ಕಾರ್ಯ ಮಾಡಿಲ್ಲ’ ಎಂದು ಅವರು ದೂರಿದ್ದಾರೆ.

ADVERTISEMENT

‘ಎನ್‌ಡಿಎ ಸರ್ಕಾರದ ಜತೆ ಸಂಬಂಧ ಹೊಂದಿರುವ ಯಾವುದೋ ಬಾಹ್ಯ ಸಂಸ್ಥೆಯು, ಈ ಕುರಿತು ತನಿಖೆಗಳು ನಡೆಯದಂತೆ ತಡೆಯುತ್ತಿದೆಯೇ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಅಮೆರಿಕದ ಎಸ್‌ಇಸಿ ಅಲ್ಲಿನ ನ್ಯಾಯಾಲಯದಲ್ಲಿ ಅದಾನಿ ಸಮೂಹದ ವಿರುದ್ಧ ದೋಷಾರೋಪಣೆ ಮಾಡಿದೆ. ಅದು ಯಾವ ಆಧಾರದ ಮೇಲೆ ಈ ಆರೋಪಗಳನ್ನು ಮಾಡಿದೆ ಎಂಬುದನ್ನು ತಿಳಿದುಕೊಳ್ಳುವುದು ಕೇಂದ್ರ ಸರ್ಕಾರಕ್ಕೆ ಮಹತ್ವ ಎನಿಸಿಲ್ಲವೇ? ಭಾರತದ ನೆಲದಲ್ಲಿ ನಡೆದಿರುವ ಈ ಭ್ರಷ್ಟಾಚಾರದ ಬಗ್ಗೆ ಎನ್‌ಡಿಎ ಸರ್ಕಾರ ಮತ್ತು ಅದರ ಅಧಿಕಾರಿ ವರ್ಗ ಚಿಂತಿತವಾಗಿಲ್ಲವೇ? ಆ ಸಮೂಹದ ಭ್ರಷ್ಟಾಚಾರದಿಂದ ಆಂಧ್ರಪ್ರದೇಶದ ಲಕ್ಷಾಂತರ ವಿದ್ಯುತ್ ಗ್ರಾಹಕರ ಮೇಲೇನಾದರೂ ಅಧಿಕ ಹೊರೆ ಬೀಳುತ್ತದೆಯೇ?’ ಎಂದೂ ಅವರು ಪತ್ರದಲ್ಲಿ ಕೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.