ADVERTISEMENT

ಉತ್ತರ ಪ್ರದೇಶ: ಜೈಲಿನಲ್ಲಿ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಮೇಲೆ ಕೈದಿಯಿಂದ ಹಲ್ಲೆ

ಪಿಟಿಐ
Published 1 ಅಕ್ಟೋಬರ್ 2025, 11:53 IST
Last Updated 1 ಅಕ್ಟೋಬರ್ 2025, 11:53 IST
   

ಲಖನೌ: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಉತ್ತರ ಪ್ರದೇಶದ ಮಾಜಿ ಸಚಿವ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಹಿರಿಯ ನಾಯಕ ಗಾಯತ್ರಿ ಪ್ರಜಾಪತಿ ಅವರ ಮೇಲೆ ಜೈಲಿನ ಆಸ್ಪತ್ರೆಯಲ್ಲಿ ಕೈದಿಯೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.

’ನಮ್ಮ ತಂದೆಯನ್ನು ಕೊಲ್ಲಲು ನಡೆದಿರುವ ವ್ಯವಸ್ಥಿತ ಪಿತೂರಿ ಇದಾಗಿದೆ. ಲಖನೌದ ಜೈಲಿನಲ್ಲಿ ಸುರಕ್ಷಿತವಾಗಿಲ್ಲದಿದ್ದರೆ, ಬೇರೆ ಕಡೆಗೆ ಸ್ಥಳಾಂತರ ಮಾಡುವುದು ಸೂಕ್ತ. ಜತೆಗೆ, ಸೂಕ್ತ ಭದ್ರತೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ’ ಎಂದು ಪ್ರಜಾಪತಿ ಅವರ ಮಗಳು ತಿಳಿಸಿದ್ದಾರೆ.

’ಉತ್ತರಪ್ರದೇಶದಲ್ಲಿ ಯಾರೂ ಸುರಕ್ಷಿತವಾಗಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿರುವ ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್, ಪ್ರಜಾಪತಿ ಮೇಲಿನ ದಾಳಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು’ ಎಂದು ’ಎಕ್ಸ್‌‘ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ADVERTISEMENT

‘ಘಟನೆ ನಡೆದ ಕೂಡಲೇ ಪ್ರಜಾಪತಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಗಾಯತ್ರಿ ಪ್ರಜಾಪತಿ ಮತ್ತು ಇತರೆ ಇಬ್ಬರು ಅಪರಾಧಿಗಳಿಗೆ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಉತ್ತರ ಪ್ರದೇಶದ ಹಿಂದಿನ ಅಖಿಲೇಶ್ ಯಾದವ್‌ ಸರ್ಕಾರದಲ್ಲಿ ಪ್ರಜಾಪತಿ ಸಚಿವರಾಗಿದ್ದರು. ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಮಗಳ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಪಿ.ಕೆ.ರಾಯ್‌, ಮೂವರನ್ನೂ ದೋಷಿಗಳು ಎಂದು ತೀರ್ಪು ನೀಡಿದ್ದರು. ಆದರೆ, ಸಾಕ್ಷ್ಯಾಧಾರ ಕೊರತೆಯ ಕಾರಣದಿಂದಾಗಿ ಆರೋಪಿಗಳಾದ ವಿಕಾಸ್‌ ವರ್ಮಾ, ರೂಪೇಶ್ವರ್‌, ಅಮರೇಂದ್ರ ಸಿಂಗ್‌ ಅಲಿಯಾಸ್‌ ಪಿಂಟು ಹಾಗೂ ಚಂದ್ರಪಾಲ್‌ ಅವರನ್ನು ಕೋರ್ಟ್‌ ಖುಲಾಸೆಗೊಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.