ADVERTISEMENT

ಗಂಗೆಯ ಹೂಳಿನಿಂದ ಸಾರವರ್ಧಿತ ಗೊಬ್ಬರ ಉತ್ಪಾದನೆ: ಕೇಂದ್ರದ ಯೋಜನೆ

ಪಿಟಿಐ
Published 20 ಮಾರ್ಚ್ 2022, 13:25 IST
Last Updated 20 ಮಾರ್ಚ್ 2022, 13:25 IST
ಗಂಗಾ ನದಿ (ಪಿಟಿಐ ಸಂಗ್ರಹ ಚಿತ್ರ)
ಗಂಗಾ ನದಿ (ಪಿಟಿಐ ಸಂಗ್ರಹ ಚಿತ್ರ)   

ನವದೆಹಲಿ:ಸಾವಯವ ಕೃಷಿ ಉತ್ತೇಜಿಸಲು ಮತ್ತು ನದಿಗಳಿಗೆ ರಾಸಾಯನಿಕ ಸೇರದಂತೆ ತಡೆಗಟ್ಟಲುಗಂಗಾ ನದಿಯ ಕೆಸರಿನಿಂದ (ಹೂಳು) ಸಾರವರ್ಧಿತ ಗೊಬ್ಬರ ಉತ್ಪಾದಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಂಗಾ ನದಿಯ ಸಂಸ್ಕರಿತ ನೀರು, ರಂಜಕ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಬೆಳೆಗಳ ಬೆಳವಣಿಗೆಗೆ ಉತ್ತಮವಾಗಿದೆ. ಕಳೆದ ಎರಡು ವಾರಗಳಲ್ಲಿ ಗಂಗಾ ನದಿಯ ಹೂಳನ್ನು ನಿಭಾಯಿಸುವ ವಿಧಾನಗಳ ಕುರಿತು ಹಲವು ಸುತ್ತಿನ ಚರ್ಚೆ ನಡೆಸಲಾಗಿದೆ ಎಂದು ಸ್ವಚ್ಛ ಗಂಗಾ ರಾಷ್ಟ್ರೀಯ ಯೋಜನೆ (ಎನ್‌ಎಂಸಿಜಿ) ನಿರ್ದೇಶಕ ಜನರಲ್ ಅಶೋಕ್ ಕುಮಾರ್ ಹೇಳಿದ್ದಾರೆ.

ಗಂಗಾ ನದಿಯ ಹೂಳಿನಿಂದ ಉತ್ಪಾದಿಸುವ ಸಾರವರ್ಧಿತ ಗೊಬ್ಬರವನ್ನು ರೈತರಿಗೆ ರಿಯಾಯಿತಿ ದರದಲ್ಲಿ ಪೂರೈಸುವ ಬಗ್ಗೆಯೂ ಪ್ರಯತ್ನ ನಡೆದಿದೆ. ಈ ಸಾರವರ್ಧಿತ ಗೊಬ್ಬರ ಉತ್ಪಾದನೆಗೆ ಕಂಪನಿಗಳೊಂದಿಗೂ ಮಾತುಕತೆ ನಡೆಯುತ್ತಿದೆಎಂದು ಅವರು ಹೇಳಿದರು.

‘ಸಂಸ್ಕರಿಸಿದ ಹೂಳು ಗೊಬ್ಬರಕ್ಕೆ ಸಮನಾಗಿದೆ.ಇದಕ್ಕೆ ಒಂದಿಷ್ಟು ಪೋಷಕಾಂಶಗಳನ್ನು ಸೇರಿಸಿದರೆ ಒಳ್ಳೆಯ ಗೊಬ್ಬರವಾಗಲಿದೆ. ಸಾವಯವ ಕೃಷಿಗೆ ಹೇಳಿ ಮಾಡಿಸಿದಂತೆಯೂ ಇದೆ.ಈ ಮೂಲಕ ಎರಡು ಉದ್ದೇಶಗಳನ್ನು ಸಾಧಿಸಬಹುದಾಗಿದೆ. ಮೊದಲನೆಯದಾಗಿ, ರೈತರು ನೈಸರ್ಗಿಕ ರಸಗೊಬ್ಬರ ಬಳಸಲು ಉತ್ತೇಜಿಸುವುದು,ಮತ್ತೊಂದು,ನದಿಯಲ್ಲಿ ಹೂಳು ತುಂಬಿಕೊಳ್ಳುವ ಸಮಸ್ಯೆಯೂ ಪರಿಹಾರವಾಗಲಿದೆ’ ಎಂದು ಅವರು ತಿಳಿಸಿದರು.

ರಾಸಾಯನಿಕ ಗೊಬ್ಬರಗಳಲ್ಲಿ ಫಾಸ್ಫೇಟ್ ಮತ್ತು ನೈಟ್ರೇಟ್ ಇರುವುದೇ ಜಲಮಾಲಿನ್ಯಕ್ಕೆ ಮುಖ್ಯ ಕಾರಣ. ದನಗಳ ಸೆಗಣಿಯು ಗಂಗಾನದಿ ಪಾತ್ರದಲ್ಲಿ ಸೇರುತ್ತಿರುವುದರಿಂದಲೂ ನದಿ ನೀರು ಮಲೀನವಾಗುತ್ತಿದೆ. ರೈತರು ಸೆಗಣಿಯನ್ನು ನದಿಗೆ ಸೇರಲು ಬಿಡದೆ, ಸಂಗ್ರಹಿಸಿ ಗೊಬ್ಬರವಾಗಿ ಬಳಸಬೇಕು ಎಂದು ಅವರು ಸಲಹೆ ನೀಡಿದರು.

‘ಈಗ ಎನ್‌ಎಂಸಿಜಿಯ ಗಮನವು ‘ಅರ್ಥ ಗಂಗಾ’ ಮೇಲೆ ಕೇಂದ್ರೀಕೃತವಾಗಿದೆ. ಇದು ಜನರನ್ನು ನದಿಯೊಂದಿಗೆ ಸಂಪರ್ಕಿಸುವ ಮತ್ತು ಜೀವನೋಪಾಯಕ್ಕಾಗಿ ಅವರ ನಡುವೆ ಆರ್ಥಿಕ ಸಂಪರ್ಕ ಸಾಧಿಸುವ ಗುರಿ ಹೊಂದಿದೆ. ಆರ್ಥಿಕ ಸಂಪರ್ಕ ಸಾಧಿಸಲು ‘ಅರ್ಥ ಗಂಗಾ’ದಡಿ ಕಳೆದ ಎರಡು ತಿಂಗಳಿನಿಂದ ವ್ಯಾಪಕವಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಅವರು ಹೇಳಿದರು.

ಕೇಂದ್ರ ಸರ್ಕಾರವು 2015ರಲ್ಲಿ ₹20 ಸಾವಿರ ಕೋಟಿ ವೆಚ್ಚದ ಎನ್‌ಎಂಸಿಜಿ ಅಥವಾ ‘ನಮಾಮಿ ಗಂಗೆ’ ಯೋಜನೆ ಪ್ರಾರಂಭಿಸಿತು. ಹಿಂದಿನ ಮತ್ತು ಚಾಲ್ತಿಯಲ್ಲಿರುವ ಯೋಜನೆಗಳು ಹಾಗೂ ಗಂಗಾ ಶುದ್ಧೀಕರಣಕ್ಕಾಗಿ ಯೋಜಿಸಿರುವ ಹೊಸ ಯೋಜನೆಗಳನ್ನು ಒಂದೇ ಸೂರಿನಡಿ ತಂದಿರುವ ಯೋಜನೆಯೇ‘ನಮಾಮಿ ಗಂಗೆ’.ಇದರಡಿಯಲ್ಲಿ ₹30,255 ಕೋಟಿ ವೆಚ್ಚದಲ್ಲಿ ಒಟ್ಟು 347 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.