ADVERTISEMENT

ಝಕೋವೊ ಕಣಿವೆಯಲ್ಲಿ ಕಾಡ್ಗಿಚ್ಚು: ಐಎಎಫ್‌, ಎನ್‌ಡಿಆರ್‌ಎಫ್‌ ಜಂಟಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 7:22 IST
Last Updated 2 ಜನವರಿ 2021, 7:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗುವಾಹಟಿ: ನಾಗಲ್ಯಾಂಡ್‌ನ ಝಕೋವೊ ಕಣಿವೆಯಲ್ಲಿ ಸಂಭವಿಸಿರುವ ಕಾಡ್ಗಿಚ್ಚು ಮಣಿಪುರದತ್ತ ಹರಡಲು ಆರಂಭಿಸಿದ್ದು, ಭಾರತೀಯ ವಾಯು ಸೇನೆಯ ನಾಲ್ಕು ಹೆಲಿಕಾಫ್ಟರ್‌ ಮತ್ತು ಎನ್‌ಡಿಆರ್‌ಎಫ್‌ನ 57 ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಕೇಂದ್ರ ಸರ್ಕಾರ ಕಾಡ್ಗಿಚ್ಚು ನಂದಿಸಲು ಎಲ್ಲ ರೀತಿಯ ನೆರವುಗಳನ್ನು ನೀಡಲು ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಮಣಿಪುರದ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರಿಗೆ ಭರವಸೆ ನೀಡಿದ್ದಾರೆ.

ಕಾಡ್ಗಿಚ್ಚನ್ನು ನಂದಿಸಲು ಶುಕ್ರವಾರ ಎಂಐ–17 ವಿ5 ಹೆಲಿಕಾಪ್ಟರ್‌ ಅನ್ನು ಮೊದಲು ನಿಯೋಜಿಸಲಾಗಿತ್ತು. ಶನಿವಾರ ಮತ್ತೆ ಮೂರು ಹೆಲಿಕಾಫ್ಟರ್‌ಗಳನ್ನು ನಿಯೋಜಿಸಲಾಗಿದೆ. ಸದ್ಯ ಬೆಂಕಿ ಪ್ರಸರಣದ ತೀವ್ರತೆಯನ್ನು ಪರಿಶೀಲಿಸಿ ಮತ್ತೆ ಮೂರು ಹೆಲಿಕಾಫ್ಟರ್‌ಗಳನ್ನು ನಿಯೋಜಿಸಲಾಗುವುದು ಎಂದು ವಾಯು ಪಡೆಯ ವಿಂಗ್‌ ಕಮಾಂಡರ್‌ ರತ್ನಾಕರ್‌ ಸಿಂಗ್‌ ತಿಳಿಸಿದ್ದಾರೆ.

ADVERTISEMENT

ನಾಗಲ್ಯಾಂಡ್‌ನ ಝಕೋವೊ ಕಣಿವೆಯಲ್ಲಿ ಮಂಗಳವಾರ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಆದರೆ ಬಲವಾದ ಗಾಳಿಯಿಂದಾಗಿ ನಾಗಾಲ್ಯಾಂಡ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬೆಂಕಿಯನ್ನು ನಿಯಂತ್ರಿಸಲು ವಿಫಲವಾಯಿತು.

ಸದ್ಯ ಬೆಂಕಿಯು ಮಣಿಪುರದತ್ತ ಹರಡಲು ಆರಂಭಿಸಿದ್ದು, ಅಲ್ಲಿನ ಅಗ್ನಿ ಶಾಮಕ ದಳವೂ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ. ಪೂರ್ವ ಭಾಗದಲ್ಲಿ ಖುಂಗ್ಹೋ ಪರ್ವತದಿಂದ ಮಾವೋ ಪ್ರದೇಶಕ್ಕೆ ಹರಡುತ್ತಿದ್ದ ಕಾಡ್ಗಿಚ್ಚನ್ನು ನಿಯಂತ್ರಿಸುವಲ್ಲಿ ಅವರು ಸಫಲರಾಗಿದ್ದಾರೆ. ದಕ್ಷಿಣ ಭಾಗದಲ್ಲೂ ಕಾಡ್ಗಿಚ್ಚು ಹಬ್ಬಿದ್ದು, ಅದನ್ನು ನಂದಿಸುವ ಕಾರ್ಯಚರಣೆ ಮುಂದುವರಿದಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.