ADVERTISEMENT

‘ಪ್ಯಾಲೆಸ್ಟೀನ್‌’ಗೆ ದೇಶದ ಮಾನ್ಯತೆ; ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್

ಏಜೆನ್ಸೀಸ್
Published 25 ಜುಲೈ 2025, 15:40 IST
Last Updated 25 ಜುಲೈ 2025, 15:40 IST
ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್‌ 
ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್‌    

ಪ್ಯಾರಿಸ್‌: ‘ಪ್ಯಾಲೆಸ್ಟೀನ್‌’ಗೆ ದೇಶದ ಮಾನ್ಯತೆ ನೀಡಲು ಫ್ರಾನ್ಸ್‌ ನಿರ್ಧರಿಸಿದೆ’ ಎಂದು ಫ್ರಾನ್ಸ್‌ನ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್‌ ಘೋಷಿಸಿದ್ದಾರೆ. ಗಾಜಾದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಹಸಿವಿನಿಂದ ಬಳಲುತ್ತಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ಫ್ರಾನ್ಸ್‌ ಈ ಘೋಷಣೆ ಮಾಡಿದೆ. ಈ ನಿರ್ಧಾರವನ್ನು ಇಸ್ರೇಲ್ ಖಂಡಿಸಿದೆ.

‘ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಈ ನಿರ್ಧಾರವನ್ನು ಅಂತಿಮಗೊಳಿಸಲಾಗುವುದು’ ಎಂದು ಮ್ಯಾಕ್ರನ್‌ ಅವರು ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ. ಅದಕ್ಕಿಂತಲೂ ತುರ್ತಾಗಿ, ಗಾಜಾದಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಿ, ನಾಗರಿಕರನ್ನು ಕಾಪಾಡಬೇಕಿದೆ’ ಎಂದಿದ್ದಾರೆ.

ಗಾಜಾ ಪಟ್ಟಿಗೆ ಮಾನವೀಯ ನೆರವು ಒದಗಿಸಲು ಇಸ್ರೇಲ್‌ ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಒತ್ತಡ ಹೇರುವ ನಿಟ್ಟಿನಲ್ಲಿ ಫ್ರಾನ್ಸ್‌ ಈ ನಿರ್ಧಾರ ಕೈಗೊಂಡಿದೆ. ‍ಪ್ಯಾಲೆಸ್ಟೀನ್‌ ಅನ್ನು ದೇಶವೆಂದು ಮಾನ್ಯಮಾಡಿದ ಅತೀ ದೊಡ್ಡ ಪಾಶ್ಚಾತ್ಯ ರಾಷ್ಟ್ರ ಫ್ರಾನ್ಸ್‌ ಆಗಿದ್ದು, ಉಳಿದ ರಾಷ್ಟ್ರಗಳು ಇದೇ ನಡೆ ಅನುಸರಿಸುವ ಸಾಧ್ಯತೆಯಿದೆ. 

ADVERTISEMENT

ಜಗತ್ತಿನಾದ್ಯಂತ 140 ದೇಶಗಳು ಪ್ಯಾಲೆಸ್ಟೀನ್‌ ಅನ್ನು ದೇಶವೆಂದು ಮಾನ್ಯ ಮಾಡಿದ್ದು, ಇದರಲ್ಲಿ ಯುರೋಪ್‌ನ ಡಜನ್‌ಗೂ ಅಧಿಕ ರಾಷ್ಟ್ರಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.