ADVERTISEMENT

ಅನ್‌ಬ್ರೇಕೆಬಲ್‌ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಪೊಲೀಸರ ಅಡ್ಡಿ: ಕೇಜ್ರಿವಾಲ್ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 13:22 IST
Last Updated 18 ಜನವರಿ 2025, 13:22 IST
ಅರವಿಂದ ಕೇಜ್ರಿವಾಲ್‌
ಅರವಿಂದ ಕೇಜ್ರಿವಾಲ್‌   

ನವದೆಹಲಿ: ‘ರಹಸ್ಯ’ವಾಗಿ ಹಾಗೂ ‘ಕುತಂತ್ರ’ದಿಂದ ಆಮ್‌ ಆದ್ಮಿ ಪಕ್ಷದ ನಾಯಕರನ್ನು ಬಂಧಿಸಿದ ಕುರಿತು ನಿರ್ಮಿಸಿರುವ ‘ಅನ್‌ಬ್ರೇಕಬಲ್‌’ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ದೆಹಲಿ ಪೊಲೀಸರು ಅನುವು ಮಾಡಿಕೊಡುತ್ತಿಲ್ಲ’ ಎಂದು ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರು ಶನಿವಾರ ಆರೋಪಿಸಿದರು.

‘ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಾಕ್ಷ್ಯಚಿತ್ರ ಪ್ರದರ್ಶಕ್ಕೆ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ’ ಎಂದು ದೆಹಲಿಯ ಹಿರಿಯ ಪೊಲೀಸ್‌ ಅಧಿಕಾರಿಗಳು ಪ್ರಕ್ರಿಯಿಸಿದರು.

ಇದನ್ನು ಪ್ರಶ್ನಿಸಿದ ಕೇಜ್ರಿವಾಲ್‌, ‘ಇದೊಂದು ಖಾಸಗಿ ಪ್ರದರ್ಶನ. ಇಲ್ಲಿನ ಮತಯಾಚನೆ ಮಾಡುವುದಿಲ್ಲ. ಯಾವುದೇ ಪಕ್ಷದ ವಿರುದ್ಧವೂ ಈ ಪ್ರದರ್ಶನ ಏರ್ಪಡಿಸಿಲ್ಲ. ಇದಕ್ಕೆ ಯಾಕೆ ಅನುಮತಿ ಪಡೆಯಬೇಕು’ ಎಂದರು.

ADVERTISEMENT

‘ಕಳೆದ ಎರಡು ವರ್ಷಗಳಲ್ಲಿ ನಮ್ಮ ನಾಯಕರನ್ನು ರಹಸ್ಯವಾಗಿ ಕುತಂತ್ರದಿಂದ ಹೇಗೆಲ್ಲಾ ಬಂಧನ ಮಾಡಲಾಯಿತು ಎನ್ನುವ ಸತ್ಯವನ್ನು ಈ ಸಾಕ್ಷ್ಯಚಿತ್ರ ಬಿಚ್ಚಿಡಲಿದೆ. ಆದ್ದರಿಂದಲೇ ಬಿಜೆಪಿಯು ಸಂಪೂರ್ಣವಾಗಿ ಭಯಗ್ರಸ್ಥಗೊಂಡಿದೆ. ಜೊತೆಗೆ ಪೊಲೀಸರ ಮೇಲೆ ಒತ್ತಡ ಹೇರಿ ಪ್ರದರ್ಶನಕ್ಕೆ ಅಡ್ಡಿ ಮಾಡುತ್ತಿದೆ’ ಎಂದರು.

‘ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಬಹುದು. ನಮ್ಮ ಮನೆಗೆ ಕರೆದು ತೋರಿಸಬಹುದು. ಹೇಗಾದರೂ ಸರಿ, ಈ ಸಾಕ್ಷ್ಯಚಿತ್ರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ’ ಎಂದು ಪಕ್ಷದ ನಾಯಕ ಸೌರಭ್‌ ಭಾರಧ್ವಾಜ್‌ ಹೇಳಿದರು.

‘ಬಾಡಿಗೆದಾರರಿಗೂ ಉಚಿತ ವಿದ್ಯುತ್‌ ನೀರು ಯೋಜನೆ ವಿಸ್ತರಣೆ’

‘ಮೂರನೇ ಬಾರಿಗೂ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಬಾಡಿಗೆದಾರರಿಗೆ ಕೂಡ ಉಚಿತ ವಿದ್ಯುತ್‌ ಹಾಗೂ ನೀರು ಪೂರೈಸುವ ಯೋಜನೆಯನ್ನು ವಿಸ್ತರಿಸಲಾಗುವುದು’ ಎಂದು ಆಮ್‌ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್‌ ಅವರು ಶನಿವಾರ ಘೋಷಿಸಿದರು. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ನಮಗೆ ಉತ್ತಮ ಶಾಲೆ ಆಸ್ಪತ್ರೆಯ ಸೌಲಭ್ಯ ಸಿಕ್ಕಿದೆ. ಆದರೆ ಉಚಿತ ವಿದ್ಯುತ್‌ ಹಾಗೂ ನೀರಿನ ಯೋಜನೆಯಿಂದ ವಂಚಿತರಾಗಿದ್ದೇವೆ’ ಎನ್ನುವುದಾಗಿ ಬಾಡಿಗೆದಾರರು ಹೇಳುತ್ತಿದ್ದಾರೆ. ಇದಕ್ಕಾಗಿಯೇ ಯೋಜನೆಯನ್ನು ವಿಸ್ತರಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.