ADVERTISEMENT

‘ಪಾಠ ಕಲಿಸುತ್ತಿದ್ದಾತ ಪಾತಕಿಯಾದ..’: ಉಗ್ರ ಆದಿಲ್ ಹುಸೇನ್ ಸ್ನಾತಕೋತ್ತರ ಪದವೀಧರ!

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2025, 23:30 IST
Last Updated 27 ಏಪ್ರಿಲ್ 2025, 23:30 IST
-
-   

ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ‘ಮಾಸ್ಟರ್‌ಮೈಂಡ್’ಗಳ ಪೈಕಿ ಆದಿಲ್‌ ಹುಸೇನ್ ಠೋಕರ್ ಕೂಡ ಒಬ್ಬ ಎಂದು ಎನ್‌ಐಎ ಹೇಳಿದೆ. ಒಂದು ಕಾಲದಲ್ಲಿ ಈತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದ್ದು, ಇದು ಕಾಶ್ಮೀರ ಜನರಲ್ಲಿ ಆಘಾತ ಮೂಡಿಸಿದೆ.

ಆದಿಲ್‌ ಹುಸೇನ್, ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾನೆ ಎಂದು ಎನ್‌ಐಎ ಹೇಳಿದೆ.

‘ಅನಂತನಾಗ್ ಜಿಲ್ಲೆಯ ಗುರಿ ಗ್ರಾಮದ ಆದಿಲ್, ಸ್ನಾತಕೋತ್ತರ ಪದವೀಧರ. ಮೃದು ಭಾಷಿಯಾಗಿದ್ದ ಆತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿದ್ದ. ಈತ ಇಂತಹ ದೊಡ್ಡ ಪ್ರಮಾಣದ ದಾಳಿಗೆ ಸಂಚು ರೂಪಿಸುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ’ ಎಂದು ಸ್ಥಳೀಯರು ಹೇಳುತ್ತಾರೆ.

ADVERTISEMENT

‘ಶಿಕ್ಷಕನಾಗಿದ್ದ ಆದಿಲ್ ಹುಸೇನ್‌ ಕ್ರಮೇಣ ಮೂಲಭೂತವಾದದತ್ತ ಆಕರ್ಷಿತನಾಗಿದ್ದ, ಆದರೆ, ಈ ವಿಚಾರದಲ್ಲಿ ಆತನ ನಿರ್ಧಾರ ದೃಢವಾಗಿತ್ತು. 2010ರಲ್ಲಿ, ಗುಂಡಿನ ಚಕಮಕಿಗಳಲ್ಲಿ ಹತರಾದ ಉಗ್ರರ ಅಂತ್ಯಕ್ರಿಯೆಗಳಲ್ಲಿ ಈತ ಪಾಲ್ಗೊಳ್ಳುತ್ತಿದ್ದ’ ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘2018ರಲ್ಲಿ ಆತ ಸಂಪೂರ್ಣವಾಗಿ ಮೂಲಭೂತವಾದಿಯಾಗಿ ಪರಿವರ್ತನೆಗೊಂಡಿದ್ದ. ಕಾನೂನುಬದ್ಧವಾಗಿಯೇ ವೀಸಾ ಪಡೆದು ಆತ ಪಾಕಿಸ್ತಾನಕ್ಕೆ ತೆರಳಿದ್ದ. ವೈಯಕ್ತಿಕ ಕಾರಣಗಳಿಗಾಗಿ ಅಲ್ಲಿಗೆ ತೆರಳಿದ್ದ ಎಂದು ಮೇಲ್ತೋರಿಕೆಗೆ ಕಂಡುಬಂದರೂ ನಂತರ ಆತ ಎಲ್‌ಇಟಿ ಸೇರಿದ್ದ. ಕಳೆದ ವರ್ಷ ಗುಪ್ತವಾಗಿ ಭಾರತ ಪ್ರವೇಶಿಸಿದ್ದ. ದೋಡಾ ಮತ್ತು ಕಿಶ್ತವಾಡ ಪ್ರದೇಶಗಳಲ್ಲಿ ಸಕ್ರಿಯವಾಗಿದ್ದ ಎನ್ನಲಾಗಿದೆ’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.