ADVERTISEMENT

ದಲೈ ಲಾಮಾ ಬಗ್ಗೆ ಭಾರತದಲ್ಲಿ ಗೂಢಾಚಾರಿಕೆ ನಡೆಸುತ್ತಿರುವ ಚೀನಾ ಮಹಿಳೆಗಾಗಿ ಶೋಧ

ಪಿಟಿಐ
Published 29 ಡಿಸೆಂಬರ್ 2022, 12:54 IST
Last Updated 29 ಡಿಸೆಂಬರ್ 2022, 12:54 IST
ದಲೈ ಲಾಮಾ ಮತ್ತು ಶಂಕಿತ ಮಹಿಳೆಯ ಚಿತ್ರ
ದಲೈ ಲಾಮಾ ಮತ್ತು ಶಂಕಿತ ಮಹಿಳೆಯ ಚಿತ್ರ    

ಗಯಾ: ಬಿಹಾರದ ಗಯಾದಲ್ಲಿ ಗೂಢಚಾರಿಕೆ ನಡೆಸುತ್ತಿರುವ ಚೀನಾದ ಮಹಿಳೆಯೊಬ್ಬರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮಹಿಳೆಯು ಬೋಧಗಯಾ ಅಥವಾ ಸುತ್ತಮುತ್ತಲ ಪ್ರದೇಶಗಳಲ್ಲಿ ನೆಲೆಸಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.

‘ಚೀನಾದ ಮಹಿಳೆ ಬೋಧಗಯಾದಲ್ಲಿ ನೆಲೆಸಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ಆದರೆ, ವಿದೇಶಾಂಗ ಇಲಾಖೆಯ ಯಾವುದೇ ದಾಖಲೆಗಳಲ್ಲಿ ಅವರ ಬಗ್ಗೆ ಮಾಹಿತಿ ಇಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ಅವರು ಚೀನಾದ ಗೂಢಚಾರಿಣಿ ಇರಬಹುದು ಎಂಬ ಶಂಕೆ ಇದೆ’ ಎಂದು ಗಯಾ ಎಸ್‌ಪಿ ಹರ್‌ಪ್ರೀತ್ ಕೌರ್ ಹೇಳಿದ್ದಾರೆ.

ಬೋಧಗಯಾದಲ್ಲಿ ಆಕೆ ತಂಗಿದ್ದ ಮನೆಯ ಮಾಲೀಕರು ನೀಡಿದ ವಿವರಣೆಯ ಆಧಾರದ ಮೇಲೆ ಗಯಾ ಪೊಲೀಸರು ಚೀನಾದ ಮಹಿಳೆಯ ರೇಖಾಚಿತ್ರವನ್ನು ಸಿದ್ಧಪಡಿಸಿದ್ದಾರೆ.

ADVERTISEMENT

ಬೋಧಗಯಾದಲ್ಲಿ ನಡೆಯುವ ಕಾಲಚಕ್ರ ಪೂಜೆ ಮತ್ತು ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರ ಚಟುವಟಿಕೆಗಳ ಮೇಲೆ ಕಣ್ಣಿಡುವ ಸಲುವಾಗಿ ಮಹಿಳೆ ಬೋಧಗಯಾದಲ್ಲಿ ದೀರ್ಘ ಕಾಲ ತಂಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ದಲೈ ಲಾಮಾ ಅವರು ವರ್ಷದಲ್ಲಿ ಕನಿಷ್ಠ ಒಂದು ತಿಂಗಳನ್ನು ಬೋಧಗಯಾದಲ್ಲೇ ಕಳೆಯುತ್ತಾರೆ.

ಸದ್ಯ ದಲೈ ಲಾಮಾ ಅವರು ಬೋಧಗಯಾದಲ್ಲಿ ಕಾಲಚಕ್ರ ಪೂಜೆಯಲ್ಲಿ ತೊಡಗಿದ್ದಾರೆ. ಗೂಢಾಚಾರಿಕೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಲಾಮಾ ಅವರ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.