ADVERTISEMENT

ಈಜಿಪ್ಟ್: 'ಗಾಜಾ ಶಾಂತಿ ಶೃಂಗ'ದಲ್ಲಿ ಮೋದಿ ಪ್ರತಿನಿಧಿಯಾಗಿ ಕೀರ್ತಿವರ್ಧನ್ ಭಾಗಿ

ಪಿಟಿಐ
Published 13 ಅಕ್ಟೋಬರ್ 2025, 2:09 IST
Last Updated 13 ಅಕ್ಟೋಬರ್ 2025, 2:09 IST
ಕೀರ್ತಿವರ್ಧನ್ ಸಿಂಗ್‌
ಕೀರ್ತಿವರ್ಧನ್ ಸಿಂಗ್‌   

ನವದೆಹಲಿ: ಈಜಿಪ್ಟ್‌ನ ಶರ್ಮ್ ಅಲ್ ಶೇಖ್‌ನ ‘ರೆಡ್ ಸಿ ರೆಸಾರ್ಟ್ ಸಿಟಿ’ಯಲ್ಲಿ ಇಂದು (ಸೋಮವಾರ) ನಡೆಯಲಿರುವ ‘ಗಾಜಾ ಶಾಂತಿ ಶೃಂಗ’ದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಯಾಗಿ ವಿದೇಶಾಂಗ ಇಲಾಖೆಯ ರಾಜ್ಯ ಕಾರ್ಯದರ್ಶಿ ಕೀರ್ತಿವರ್ಧನ್ ಸಿಂಗ್ ಅವರು ಭಾಗಿಯಾಗಲಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿತ ವಿಶ್ವದ 20 ಪ್ರಮುಖ ನಾಯಕರು ಭಾಗವಹಿಸುವ ಈ ಶೃಂಗಕ್ಕೆ ಪ್ರಧಾನಿ ಮೋದಿಯವರನ್ನೂ ಆಹ್ವಾನಿಸಲಾಗಿತ್ತು. ಆದರೆ ತಮ್ಮ ವಿಶೇಷ ಪ್ರತಿನಿಧಿಯಾಗಿ ಕೀರ್ತಿವರ್ಧನ್ ಅವರನ್ನು ಮೋದಿ ಕಳುಹಿಸಿಕೊಟ್ಟಿದ್ದಾರೆ.

‘ಶರ್ಮ್ ಅಲ್ ಶೇಖ್‌ನಲ್ಲಿ ನಡೆಯಲಿರುವ ಗಾಜಾ ಶಾಂತಿ ಶೃಂಗದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿನಿಧಿಯಾಗಿ ಐತಿಹಾಸಿಕ ನಗರ ಕೈರೊಗೆ ಬಂದೆ’ ಎಂದು ಸಿಂಗ್ ‘ಎಕ್ಸ್’ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

‘ಶರ್ಮ್ ಅಲ್ ಶೇಖ್ ಶಾಂತಿ ಶೃಂಗ’ವನ್ನು ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಸಿಸಿ ನೇತೃತ್ವದಲ್ಲಿ ನಡೆಯುತ್ತಿದ್ದು, ಗಾಜಾ ಹಾಗೂ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವ ಬಗ್ಗೆ ಚರ್ಚೆಗಳು ನಡೆಯಲಿವೆ. ಸಿಸಿ ಹಾಗೂ ಟ್ರಂಪ್ ಜಂಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, ಇಟಲಿ ಪ್ರಧಾನಿ ಜಾರ್ಜಿಯ ಮೆಲೊನಿ, ಫ್ರೆಂಚ್ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಹಾಗೂ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್ ಈ ಶೃಂಗದಲ್ಲಿ ಭಾಗಿಯಾಗಲಿದ್ದಾರೆ.

‘ಗಾಜಾ ಪಟ್ಟಿಯಲ್ಲಿ ಯುದ್ಧ ಅಂತ್ಯಗೊಳಿಸಲು,ಮಧ್ಯಪ್ರಾಚ್ಯದಲ್ಲಿ ಶಾಂತಿ ಹಾಗೂ ಸ್ಥಿರತೆ ಉಂಟು ಮಾಡುವ ಸಾಧ್ಯತೆಯನ್ನು ಹೆಚ್ಚಿಸಲು ಮತ್ತು ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯ ಬಗ್ಗೆ ಈ ಶೃಂಗದಲ್ಲಿ ಚರ್ಚೆ ನಡೆಯಲಿದೆ ಎಂದು ಈಜಿಪ್ಟ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.