ADVERTISEMENT

ಬಾತ್‌ರೂಮ್‌ ಸ್ವಚ್ಛಗೊಳಿಸುವ ರಾಸಾಯನಿಕದಿಂದ ತುಪ್ಪ! ಲಡ್ಡು ವಿವಾದದ ಬಗ್ಗೆ ನಾಯ್ಡು

ಪಿಟಿಐ
Published 6 ಫೆಬ್ರುವರಿ 2026, 13:43 IST
Last Updated 6 ಫೆಬ್ರುವರಿ 2026, 13:43 IST
<div class="paragraphs"><p>ಮಾಜಿ ಮುಖ್ಯಮಂತ್ರಿ  ವೈ.ಎಸ್‌.ಜಗನ್ ಮೋಹನ್ ರೆಡ್ಡಿ, ತಿರುಪತಿ ಲಡ್ಡು,&nbsp;ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು</p></div>

ಮಾಜಿ ಮುಖ್ಯಮಂತ್ರಿ ವೈ.ಎಸ್‌.ಜಗನ್ ಮೋಹನ್ ರೆಡ್ಡಿ, ತಿರುಪತಿ ಲಡ್ಡು, ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು

   

Credit: PTI photos; X/@TTDevasthanams

ಅಮರಾವತಿ: ಈ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ಪ್ರಸಾದ ತಯಾರಿಕೆಗೆ ಬಾತ್‌ರೂಮ್ ಸ್ವಚ್ಛ ಮಾಡಲು ಬಳಸುವ ರಾಸಾಯನಿಕದಿಂದ ತಯಾರಿಸಲಾದ ತುಪ್ಪವನ್ನು ಬಳಕೆ ಮಾಡಲಾಗಿತ್ತು ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ.

ADVERTISEMENT

ಕರ್ನೂಲ್‌ ಜಿಲ್ಲೆ ಕಲುಗುಟ್ಲಾದಲ್ಲಿ ಗ್ರಾಮಸಭೆ ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ‘ಹಿಂದಿನ ಸರ್ಕಾರವು ತಿರುಪತಿ ವೆಂಕಟೇಶ್ವರ ಸ್ವಾಮಿಯ ಪ್ರಸಾದಕ್ಕೆ ಕಲಬೆರಕೆ ತುಪ್ಪ ಬಳಸುವ ಮೂಲಕ ದೇಗುಲದ ಗೌರವಕ್ಕೆ ಧಕ್ಕೆ ತರಲು ಯತ್ನಿಸಿತ್ತು’ ಎಂದು ದೂರಿದ್ದಾರೆ.

ಕಲಬೆರಕೆ ತುಪ್ಪವನ್ನು ಶ್ರೀಶೈಲಂ ದೇವಸ್ಥಾನಕ್ಕೂ ಪೂರೈಕೆ ಮಾಡಲಾಗುತ್ತಿತ್ತು. ದೇಗುಲದ ಭಕ್ತನಾಗಿ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ರಾಸಾಯನಿಕಗಳಿಂದ ಮಾಡಿದ ಕಲಬೆರಕೆ ತುಪ್ಪವನ್ನು ಐದು ವರ್ಷಗಳ ಕಾಲ ಲಡ್ಡು ತಯಾರಿಸಲು ಬಳಸಲಾಗುತ್ತಿತ್ತು ಎಂದಿದ್ದಾರೆ.

‘ಪ್ರಾಣಿಗಳ ಕೊಬ್ಬನ್ನೂ ಬಳಕೆ ಮಾಡಲಾಗಿತ್ತು ಎಂದು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ವರದಿ ತಿಳಿಸಿದೆ’ ಎಂದೂ ತಿಳಿಸಿದ್ದಾರೆ.

ತಿರುಪತಿ ಲಡ್ಡು ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸಿಬಿಐ ನೇತೃತ್ವದ ವಿಶೇಷ ತನಿಖಾ ತಂಡವು (ಎಸ್‌ಐಟಿ) ತನಿಖೆಯನ್ನು ಪೂರ್ಣಗೊಳಿಸಿದ್ದು, ಸಸ್ಯಜನ್ಯ (ವನಸ್ಪತಿ) ಎಣ್ಣೆ ಬಳಸಿ ತುಪ್ಪ ತಯಾರಿಸುವ ಮೂಲಕ ₹234 ಕೋಟಿ ಮೊತ್ತದ ವಂಚನೆ ನಡೆದಿರುವುದನ್ನು ಪತ್ತೆ ಮಾಡಿದೆ.

2019–2024ರ ನಡುವೆ ತಿರುಮಲ ತಿರುಪತಿ ದೇಗುಲಕ್ಕೆ ಪೂರೈಕೆದಾರರು ಹಾಲಿನ ಬದಲು ಸಸ್ಯಜನ್ಯ ಎಣ್ಣೆ ಬಳಸಿ ತುಪ್ಪ ತಯಾರಿಸಿರುವ ಸಂಗತಿ ಬಯಲಾಗಿದೆ. ಜತೆಗೆ, ಪ್ರಾಣಿಗಳ ಕೊಬ್ಬು, ಹಂದಿ ಕೊಬ್ಬು ಅಥವಾ ಮೀನಿನ ಎಣ್ಣೆಯಿಂದ ತುಪ್ಪ ತಯಾರಿಸಿರುವ ಸಾಧ್ಯತೆ ವಿರಳ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

ಪ್ರಕರಣದಲ್ಲಿ ತುಪ್ಪ ಪೂರೈಕೆದಾರರು, ಟಿಟಿಡಿಯ ನೌಕರರು ಹಾಗೂ ಇತರರನ್ನು ಆರೋಪಿಗಳು ಎಂದು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.