ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜೀಬ್ಲೀ ಆ್ಯನಿಮೇಟೆಡ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ಸೆಲೆಬ್ರಿಟಿಗಳು, ಸೋಷಿಯಲ್ ಮೀಡಿಯಾ ಇನ್‌ಫ್ಲುಯನ್ಸರ್ ಸೇರಿದಂತೆ ಸಾಮಾನ್ಯ ಜನರು ಇದಕ್ಕೆ ಹೊರತಾಗಿಲ್ಲ.
ಆದರೆ ಈ ಟ್ರೆಂಡ್ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸದ್ದು ಮಾಡಿದೆ. ಇದರ ಬೆನ್ನೆಲ್ಲೇ ಗೋವಾ ಪೊಲೀಸರು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪೊಲೀಸರು, ನಿಮ್ಮ (ಸಾರ್ವಜನಿಕರು) ಫೋಟೊಗಳನ್ನು ಜೀಬ್ಲೀ ಆ್ಯನಿಮೇಟೆಡ್ ಚಿತ್ರಗಳನ್ನಾಗಿ ಬದಲಾಯಿಸಿಕೊಳ್ಳುವ ಮುನ್ನ ಎಚ್ಚರ ವಹಿಸಿ. ಈ ಟ್ರೆಂಡ್ ಮನರಂಜನೆಯ ಭಾಗವಾಗಿರಬಹುದು. ಆದರೆ ನಿಮ್ಮ (ಸಾರ್ವಜನಿಕರು) ವೈಯಕ್ತಿಕ ಚಿತ್ರಗಳನ್ನು ನಿರ್ದಿಷ್ಟ ಆ್ಯಪ್‌ಗಳಲ್ಲಿ ಅಪ್‌ಲೋಡ್ ಮಾಡಿದಾಗ ನಿಮ್ಮ ಫೋಟೊಗಳು ಸೈಬರ್ ವಂಚಕರು ದುರುಪಯೋಗ ಪಡಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.
'ನಿಮ್ಮ (ಸಾರ್ವಜನಿಕರು) ಫೋಟೊಗಳನ್ನು ಜೀಬ್ಲೀ ಆ್ಯನಿಮೇಟೆಡ್ ಚಿತ್ರಗಳನ್ನಾಗಿ ಬದಲಾಯಿಸಿಕೊಳ್ಳುವ ಮುನ್ನ ಯೋಚಿಸಿ. ಈ ಸಂಬಂಧ ಸೈಬರ್ ವಂಚನೆಯಾಗಿದ್ದಲ್ಲಿ ತಕ್ಷಣ 1930ಗೆ ಕರೆ ಮಾಡಿ ಮಾಹಿತಿ ನೀಡಿ' ಎಂದೂ ಪೋಸ್ಟ್‌ನಲ್ಲಿ ತಿಳಿಸಿದೆ.
ಸ್ಟುಡಿಯೋ ಜೀಬ್ಲೀ ಎಂಬುವುದು ಓಪನ್‌ಎಐ ಅಭಿವೃದ್ಧಿಪಡಿಸಿದ ಜನಪ್ರಿಯ ಎಐ ಚಾಟ್‌ಬಾಟ್ ಚಾಟ್‌ಜಿಪಿಟಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಮತ್ತು ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ಸೇರಿದಂತೆ ಅನಿಮೇಟೆಡ್ ಚಿತ್ರಗಳು ಗಮನ ಸೆಳೆದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.