ADVERTISEMENT

ಹೈದರಾಬಾದ್‌ ಪಾಲಿಕೆ: ಟಿಆರ್‌ಎಸ್‌ ಸಮೀಪಕ್ಕೆ ಬಂದ ಬಿಜೆಪಿಗೆ 46 ಸ್ಥಾನ

3ನೇ ಸ್ಥಾನಕ್ಕೆ ಎಐಎಂಐಎಂ

ಏಜೆನ್ಸೀಸ್
Published 4 ಡಿಸೆಂಬರ್ 2020, 16:53 IST
Last Updated 4 ಡಿಸೆಂಬರ್ 2020, 16:53 IST
ಚುನಾವಣಾ ಪ್ರಚಾರದಲ್ಲಿ ಟಿಆರ್‌ಎಸ್‌ ಕಾರ್ಯಕರ್ತರು–ಸಾಂದರ್ಭಿಕ ಚಿತ್ರ
ಚುನಾವಣಾ ಪ್ರಚಾರದಲ್ಲಿ ಟಿಆರ್‌ಎಸ್‌ ಕಾರ್ಯಕರ್ತರು–ಸಾಂದರ್ಭಿಕ ಚಿತ್ರ   

ಹೈದರಾಬಾದ್‌: 'ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌' (ಜಿಎಚ್‌ಎಂಸಿ) ಚುನಾವಣೆಯ ಮತ ಎಣಿಕೆ ಶುಕ್ರವಾರ ನಡೆಯುತ್ತಿದ್ದು, ಬಿಜೆಪಿ ಮುನ್ನಡೆ ಕಾಯ್ದುಕೊಳ್ಳಲು ಸಫಲವಾಗಿಲ್ಲ. ಪಾಲಿಕೆ ಚುಕ್ಕಾಣಿ ಹಿಡಿಯುವ ಬಿಜೆಪಿ ಕನಸನ್ನು ಆಡಳಿತಾರೂಢ ಟಿಆರ್‌ಎಸ್‌ ಪಕ್ಷವು ಮಸುಕುಗೊಳಿಸಿದೆ.ಆದರೆ, ಟಿಆರ್‌ಎಸ್‌ಗೆ ಅತ್ಯಂತ ಸಮೀಪದ ಪ್ರತಿಸ್ಪರ್ಧಿಯಾಗಿ ಬಿಜೆಪಿ ಹೊರಹೊಮ್ಮಿದೆ.

ತೆಲಂಗಾಣ ರಾಜ್ಯದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಅಪ್‌ಡೇಟ್‌ ಪ್ರಕಾರ, ಟಿಆರ್‌ಎಸ್ 54ವಾರ್ಡ್‌ಗಳಲ್ಲಿ ಮತ್ತು ಅಸಾದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ 42 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ 46ವಾರ್ಡ್‌ಗಳಲ್ಲಿ ಹಾಗೂ ಕಾಂಗ್ರೆಸ್‌ 2ವಾರ್ಡ್‌ನಲ್ಲಿ ಗೆಲುವು ಪಡೆದಿದೆ.

ಈ ಮೂಲಕ ಬಿಜೆಪಿ 2ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ಈ ಸಾಧನೆಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಎಐಎಂಐಎಂ 3ನೇ ಸ್ಥಾನಕ್ಕೆ ತಳ್ಳಲು ಪಟ್ಟಿದೆ.150 ವಾರ್ಡ್‌ಗಳ ಪೈಕಿ 144ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದೆ.

ಬಿಜೆಪಿಮುನ್ನಡೆಯಲ್ಲಿರುವಸ್ಥಾನಗಳಲ್ಲಿ ಗೆಲವು ಪಡೆದರೆ, ಕಳೆದ ಚುನಾವಣೆಗಿಂತ ಅತಿ ದೊಡ್ಡ ಬದಲಾವಣೆ ಕಂಡಂತಾಗಲಿದೆ. 2016ರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಕೇವಲ 4 ಸ್ಥಾನಗಳಲ್ಲಿ ಗೆಲುವು ಪಡೆದಿತ್ತು. ಆಗ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು. ಆ ಚುನಾವಣೆಯಲ್ಲಿ ಕೆ.ಚಂದ್ರಶೇಖರ್‌ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) 150 ವಾರ್ಡ್‌ಗಳ ಪೈಕಿ 99 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿತ್ತು.

ಮಂಗಳವಾರ ನಡೆದ ಪಾಲಿಕೆ ಚುನಾವಣೆಯಲ್ಲಿ ಮತದಾನಕ್ಕೆ ಬ್ಯಾಲೆಟ್‌ ಪೇಪರ್‌ (ಮತಪತ್ರ) ಬಳಕೆ ಮಾಡಲಾಗಿತ್ತು.

ಶುಕ್ರವಾರ ಬೆಳಿಗ್ಗೆ 8ಕ್ಕೆ ಅಂಚೆ ಮತಗಳ ಎಣಿಕೆಯೊಂದಿಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಯಿತು. ಆರಂಭದಲ್ಲಿ ಬಿಜೆಪಿ ಸುಮಾರು 80 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿತ್ತು. ಮತಪತ್ರ ಬಳಕೆಯಾಗಿರುವುದರಿಂದ ಫಲಿತಾಂಶ ಹೊರಬರಲು ಹೆಚ್ಚಿನ ಸಮಯ ಅಗತ್ಯವಾಗಿದೆ.

ಒಟ್ಟು 74.67 ಲಕ್ಷ ಮತದಾರರ ಪೈಕಿ 34.50 ಲಕ್ಷ ಮಂದಿ ಮತದಾನ ನಡೆಸಿದ್ದರು. ಈ ಮೂಲಕ ಶೇ 46.55ರಷ್ಟು ಮತದಾನ ದಾಖಲಾಗಿತ್ತು.

ಟಿಆರ್‌ಎಸ್‌ ಎಲ್ಲ 150 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಬಿಜೆಪಿ 149 ವಾರ್ಡ್‌ಗಳಲ್ಲಿ, ಕಾಂಗ್ರೆಸ್‌, ಎಐಎಂಐಎಂ ಹಾಗೂ ಟಿಡಿಪಿ ಕ್ರಮವಾಗಿ 146, 51 ಹಾಗೂ 106 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಮುಖಂಡರು ಬಿಜೆಪಿ ಪರ ಪಾಲಿಕೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.