ADVERTISEMENT

ಕಾಂಪೌಂಡರ್‌ಗಳಿಂದ ಮದ್ದು ಪಡೆಯುತ್ತಿರುವ ಕಾಂಗ್ರೆಸ್‌: ಗುಲಾಂ ನಬಿ ಆಜಾದ್ ಟೀಕೆ

ಪಿಟಿಐ
Published 30 ಆಗಸ್ಟ್ 2022, 1:45 IST
Last Updated 30 ಆಗಸ್ಟ್ 2022, 1:45 IST
ಗುಲಾಂ ನಬಿ ಆಜಾದ್‌
ಗುಲಾಂ ನಬಿ ಆಜಾದ್‌   

ನವದೆಹಲಿ: ‘ಅನಾರೋಗ್ಯಪೀಡಿತ ಕಾಂಗ್ರೆಸ್ ಪಕ್ಷವು ವೈದ್ಯರಿಂದ ಔಷಧ ಪಡೆದುಕೊಳ್ಳುವ ಬದಲಿಗೆ ಕಾಂಪೌಂಡರ್‌ಗಳಿಂದ ಔಷಧ ಪಡೆದುಕೊಳ್ಳುತ್ತಿದೆ’ ಎಂದು ಕಾಂಗ್ರೆಸ್ ಪಕ್ಷವನ್ನು ಇತ್ತೀಚೆಗೆ ತೊರೆದಿರುವ ಗುಲಾಂ ನಬಿ ಆಜಾದ್‌ ಸೋಮವಾರ ಹೇಳಿದ್ದಾರೆ.

ಕಾಂಗ್ರೆಸ್ ನೆಲೆಗಟ್ಟು ದುರ್ಬಲ ವಾಗಿದೆ ಮತ್ತು ಪಕ್ಷವು ಯಾವುದೇ ಸಂದರ್ಭದಲ್ಲಿ ಕುಸಿಯ ಬಹುದು. ಆದರೆ, ಕಾಂಗ್ರೆಸ್ ನಾಯಕರಿಗೆ ಈ ಬಗ್ಗೆ ಗಮನ ಹರಿಸಲು ಸಮಯವಿಲ್ಲ ಎಂದು ಟೀಕಿಸಿದ್ದಾರೆ.

ರಾಜಕಾರಣವು ರಾಹುಲ್‌ ಗಾಂಧಿ ಅವರ ಸಹಜ ಪ್ರವೃತ್ತಿ ಅಲ್ಲ. ಅವರಿಗೆ ರಾಜಕಾರಣದಲ್ಲಿ ಆಸಕ್ತಿಯೂ ಇಲ್ಲ ಎಂದೂ ಹೇಳಿದ್ದಾರೆ.

ADVERTISEMENT

ಪಕ್ಷವನ್ನು ಒಗ್ಗಟ್ಟಾಗಿ ಇರಿಸುವುದರ ಬದಲು ಮುಖಂಡರು ಪಕ್ಷ ಬಿಟ್ಟು ಹೋಗುವಂತೆ ಮಾಡಲಾಗುತ್ತಿದೆ ಎಂಬ ಭಾವನೆ ಜನರಲ್ಲಿ ಇದೆ ಎಂದು ಮಾಧ್ಯಮ ಪ್ರತಿನಿಧಿಗಳ ಜತೆಗೆ ತಮ್ಮ ನಿವಾಸದಲ್ಲಿ ಮಾತನಾಡಿದ ಆಜಾದ್‌ ಹೇಳಿದರು.

ತಮ್ಮದು ಕಾಂಗ್ರೆಸ್‌ ಸಿದ್ಧಾಂತ. ಪಕ್ಷವನ್ನು ತೊರೆಯಲು ಎಂದೂ ಬಯಸಿರಲಿಲ್ಲ. ತಾವು ವಿದ್ಯಾರ್ಥಿ ದೆಸೆಯಿಂದಲೇ ಪಕ್ಷದ ಜತೆ ಬೆಳೆದವರು. ಆದರೆ, ‍ಪಕ್ಷ ತೊರೆಯುವಂತೆ ಬಲವಂತ ಮಾಡಲಾಯಿತು ಎಂದಿದ್ದಾರೆ. ಬಿಜೆಪಿ ಸೇರುವುದಿಲ್ಲ. ಅದು ಜಮ್ಮು–ಕಾಶ್ಮೀರದ ರಾಜಕಾರಣಕ್ಕೆ ಒಳ್ಳೆಯದಲ್ಲ ಎಂದ ಅವರು ಸ್ವಂತ ಪಕ್ಷ ಕಟ್ಟುವುದಾಗಿ ತಿಳಿಸಿದ್ದಾರೆ.

‘ಕಾಂಗ್ರೆಸ್‌ ಪಕ್ಷಕ್ಕೆ ನಾನು ಶುಭ ಹಾರೈಕೆಯನ್ನಷ್ಟೇ ಮಾಡಬಹುದು. ಆದರೆ, ನನ್ನ ಹಾರೈಕೆಗಿಂತ ಆ ಪಕ್ಷಕ್ಕೆ ಔಷಧ ಬೇಕಾಗಿದೆ’ ಎಂದು ಅವರು ಹೇಳಿದ್ದಾರೆ.

ಮೋದಿಯ ಮಾನವೀಯತೆ
‘ಮಕ್ಕಳು ಅಥವಾ ಕುಟುಂಬ ಇಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಒರಟಾಗಿ ಇರುತ್ತಾರೆ ಎಂಬ ಭಾವನೆ ನನ್ನಲ್ಲಿ ಇತ್ತು. ಆದರೆ ಅವರು ಮಾನವೀಯತೆ ಮೆರೆದರು’ ಎಂದು ಆಜಾದ್‌ ಹೇಳಿದ್ದಾರೆ.

ಜಮ್ಮು–ಕಾಶ್ಮೀರದಲ್ಲಿ ಗುಜರಾತ್‌ನ ಜನರು ಇದ್ದ ಬಸ್‌ನಲ್ಲಿ2007ರಲ್ಲಿ ಗ್ರೆನೇಡ್‌ ಸ್ಫೋಟಿಸಲಾಗಿತ್ತು. ಆಗ ಮೋದಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿದ್ದರು. ಆಜಾದ್‌ ಅವರು ಜಮ್ಮು–ಕಾಶ್ಮೀರ ಮುಖ್ಯಮಂತ್ರಿಯಾಗಿದ್ದರು. ಆಜಾದ್‌ ಅವರು ರಾಜ್ಯಸಭೆಯಿಂದ ನಿವೃತ್ತಿಯಾದಾಗ ಈ ಘಟನೆಯನ್ನು ನೆನಪಿಸಿಕೊಂಡು ಮೋದಿ ಭಾವುಕರಾಗಿದ್ದರು.

ಮೋದಿ ಅವರು ಮಾಡಿದ ವಿದಾಯ ಭಾಷಣದಲ್ಲಿ ಅವರು ಭಾವುಕರಾದದ್ದು ‘ಅನಕ್ಷರಸ್ಥ’ ಕಾಂಗ್ರೆಸಿಗರಲ್ಲಿ ಭಿನ್ನ ಭಾವನೆಯನ್ನು ಸೃಷ್ಟಿಸಿದೆ. ಅಂದು ರಾಜ್ಯಸಭೆಯಲ್ಲಿ ವ್ಯಕ್ತವಾದ ಭಾವನೆ ಆ ದುರಂತದ ಕುರಿತೇ ಹೊರತು ಪರಸ್ಪರರಿಗೆ ಸಂಬಂಧಿಸಿ ಅಲ್ಲ ಎಂದು ಆಜಾದ್‌ ಹೇಳಿದ್ದಾರೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.