ADVERTISEMENT

ಮುಂಬೈನಿಂದ ಗೋವಾಕ್ಕೆ ಬಂದ ಕ್ರೂಸ್ ಹಡಗಿನಲ್ಲಿದ್ದ 66 ಜನರಿಗೆ ಕೋವಿಡ್

ಪಿಟಿಐ
Published 3 ಜನವರಿ 2022, 13:32 IST
Last Updated 3 ಜನವರಿ 2022, 13:32 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಣಜಿ: ಮುಂಬೈನಿಂದ ಗೋವಾಕ್ಕೆ ಬಂದ ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿದ್ದ 2,000ಕ್ಕೂ ಅಧಿಕ ಜನರಲ್ಲಿ 66 ಜನರಿಗೆ ಕೋವಿಡ್-19 ದೃಢಪಟ್ಟಿದೆ ಎಂದು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೋಮವಾರ ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದೇ ಹಡಗಿನ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ, ರೇವ್ ಪಾರ್ಟಿ ಮಾಡುತ್ತಿದ್ದವರನ್ನು ಬಂಧಿಸಿತ್ತು. ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ ಕೂಡ ಸಿಕ್ಕಿಬಿದ್ದಿದ್ದರು.

'ಹಡಗಿನಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲು ಬಂದ ವೈದ್ಯಕೀಯ ತಂಡ ಪಿಪಿಇ ಕಿಟ್‌ ಧರಿಸಿತ್ತು. ಮಾದರಿ ಸಂಗ್ರಹ ಪ್ರಕ್ರಿಯೆಯು ಸೋಮವಾರ ಮಧ್ಯಾಹ್ನದವರೆಗೆ ಮುಂದುವರಿಯಿತು. ಭಾನುವಾರದಂದು ಸಿಬ್ಬಂದಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾದ ಬಳಿಕ ಹಡಗಿನಲ್ಲಿದ್ದ ಎಲ್ಲರ ಪರೀಕ್ಷೆ ನಡೆಸುವುದು ಅಗತ್ಯವಾಗಿತ್ತು' ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಆರ್‌ಟಿ-ಪಿಸಿಆರ್ ಪರೀಕ್ಷೆಯ ವರದಿ ಬರುವವರೆಗೂ ಯಾರೊಬ್ಬರೂ ಹಡಗಿನಿಂದ ಇಳಿಯಬಾರದು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಲೈನರ್ ಅನ್ನು ಮೊರ್ಮುಗಾವ್ ಪೋರ್ಟ್ ಟ್ರಸ್ಟ್ (MPT) ಕ್ರೂಸ್ ಟರ್ಮಿನಲ್ ಹತ್ತಿರ ಲಂಗರು ಹಾಕಿ ನಿಲ್ಲಿಸಲಾಗಿದೆ.

ಮಧ್ಯಾಹ್ನ ಟ್ವೀಟ್ ಮಾಡಿರುವ ವಿಶ್ವಜಿತ್ ರಾಣೆ, 'ಕಾರ್ಡೆಲಿಯಾ ಕ್ರೂಸ್ ಹಡಗಿನಿಂದ ಪರೀಕ್ಷಿಸಲಾದ 2000 ಮಾದರಿಗಳಲ್ಲಿ 66 ಪ್ರಯಾಣಿಕರಿಗೆ ಕೋವಿಡ್ ದೃಢಪಟ್ಟಿದೆ. ಆಯಾ ಜಿಲ್ಲಾಧಿಕಾರಿಗಳು ಮತ್ತು ಎಂಪಿಟಿ ಸಿಬ್ಬಂದಿಗೆ ತಿಳಿಸಲಾಗಿದೆ. ಹಡಗಿನಿಂದ ಪ್ರಯಾಣಿಕರನ್ನು ಇಳಿಸಲು ಅನುಮತಿಸಬೇಕೆ, ಬೇಡವೇ ಎಂಬುದನ್ನು ಅಧಿಕಾರಿಗಳು ನಿರ್ಧರಿಸುತ್ತಾರೆ' ಎಂದು ತಿಳಿಸಿದ್ದಾರೆ.

ಖಾಸಗಿ ಸಂಸ್ಥೆಯೊಂದು ನಿರ್ವಹಿಸುತ್ತಿರುವ ಹಡಗು ಭಾನುವಾರ ಗೋವಾದ ಮೊರ್ಮುಗಾವ್ ಪೋರ್ಟ್ ಟ್ರಸ್ಟ್‌ಗೆ ಆಗಮಿಸಿತ್ತು.

ಗೋವಾದಲ್ಲಿ ಭಾನುವಾರ ಹೊಸದಾಗಿ 388 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,81,570ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಈವರೆಗೂ 3,523 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.