
ಗೋವಾದ ಅರ್ಪೋರಾ ಗ್ರಾಮದಲ್ಲಿನ ಭಾನುವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಹೊತ್ತಿ ಉರಿದ ನೈಟ್‌ಕ್ಲಬ್
ಪಿಟಿಐ ಚಿತ್ರ
ಪಣಜಿ: ಉತ್ತರ ಗೋವಾದ ಅರ್ಪೋರಾ ಗ್ರಾಮದಲ್ಲಿರುವ ನೈಟ್‌ಕ್ಲಬ್ ‘ಬರ್ಚ್ ಬೈ ರೋಮಿಯೊ ಲೇನ್’ನಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ 25 ಮಂದಿ ಸಜೀವ ದಹನವಾಗಿದ್ದು, ಆರು ಜನರು ಗಾಯಗೊಂಡಿದ್ದಾರೆ.
ಮೃತರಲ್ಲಿ ನಾಲ್ವರು ವಿದೇಶಿ ಪ್ರವಾಸಿಗರು, 14 ಮಂದಿ ಕ್ಲಬ್‌ನ ಸಿಬ್ಬಂದಿ ಸೇರಿದ್ದಾರೆ. ಇತರ ಏಳು ಜನರ ಗುರುತು ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ನೈಟ್‌ಕ್ಲಬ್‌ನ ನಾಲ್ವರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಕ್ಲಬ್‌ನ ಮುಖ್ಯ ಪ್ರಧಾನ ವ್ಯವಸ್ಥಾಪಕ ರಾಜೀವ್ ಮೋದಕ್, ಪ್ರಧಾನ ವ್ಯವಸ್ಥಾಪಕ ವಿವೇಕ್ ಸಿಂಗ್, ಬಾರ್ ವ್ಯವಸ್ಥಾಪಕ ರಾಜೀವ್ ಸಿಂಘಾನಿಯಾ ಹಾಗೂ ಗೇಟ್ ವ್ಯವಸ್ಥಾಪಕ ರಿಯಾಂಶು ಠಾಕೂರ್ ಅವರನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ನೈಟ್‌ಕ್ಲಬ್ ಮಾಲೀಕರಾದ ಸೌರಭ್ ಲೂಥ್ರಾ ಹಾಗೂ ಗೌರವ್ ಲೂಥ್ರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಅವರನ್ನು ಶೀಘ್ರವೇ ಬಂಧಿಸಲಾಗುವುದು’ ಎಂದಿದ್ದಾರೆ.
‘ಈ ದುರ್ಘಟನೆ ಶನಿವಾರ ರಾತ್ರಿ 11.45ಕ್ಕೆ ಸಂಭವಿಸಿದೆ. ಎಲೆಕ್ಟ್ರಿಕ್ ಪಟಾಕಿ’ಗಳನ್ನು ಸಿಡಿಸಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದೂ ಹೇಳಿದ್ದಾರೆ.
ಸಂತ್ರಸ್ತರ ಪೈಕಿ ಹೆಚ್ಚು ಮಂದಿ ಕ್ಲಬ್‌ನ ಮೊದಲ ಮಹಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಈ ವೇಳೆ, ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅರ್ಪೋರಾ ಗ್ರಾಮವು ಪಣಜಿಯಿಂದ 25 ಕಿ.ಮೀ. ದೂರದಲ್ಲಿದೆ.
ಗೋವಾದ ಅರ್ಪೋರಾ ಗ್ರಾಮದಲ್ಲಿನ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್‌ನಲ್ಲಿ ಭಾನುವಾರ ತಡರಾತ್ರಿ ಹೊತ್ತಿಕೊಂಡ ಬೆಂಕಿಯನ್ನು ಅಗ್ನಿ ಶಾಮಕ ಸಿಬ್ಬಂದಿ ನಂದಿಸಿದರು
ಸರಪಂಚ ವಶಕ್ಕೆ: ಈ ಕ್ಲಬ್‌ಗೆ 2013ರಲ್ಲಿ ಟ್ರೇಡ್ ಲೈಸೆನ್ಸ್ ನೀಡಿದ್ದ ಅರ್ಫೋರಾ–ನಗೋವಾ ಪಂಚಾಯಿತಿ ಸರಪಂಚ ರೋಷನ್ ರೆಡ್ಕರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕ್ರಮ: ‘ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ, ನೈಟ್ ಕ್ಲಬ್ ನಡೆಸಲಾಗುತ್ತಿತ್ತು ಎನ್ನಲಾಗಿದೆ. ಇದಕ್ಕೆ ಅನುಮತಿ ನೀಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಆರು ಜನ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದು, ಅವರಿಗೆ ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಶೋಕ: ನೈಟ್‌ಕ್ಲಬ್‌ನಲ್ಲಿ ಅಗ್ನಿ ಅವಘಡದಿಂದಾಗಿ 25 ಮಂದಿ ಮೃತಪಟ್ಟ ಘಟನೆ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಶೋಕ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಾವಂತ್ ಅವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ದುರ್ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.
‘ಮೃತರ ಕುಟುಂಬಗಳಿಗೆ ನನ್ನ ಸಾಂತ್ವನಗಳು ಹಾಗೂ ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಗೋವಾ ಚರ್ಚ್ ಕೂಡ ಈ ದುರ್ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಜನರ ಸಾವಿಗೆ ಸಂತಾಪ ಸೂಚಿಸಿದೆ.
ಪರಿಹಾರ: ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹50 ಸಾವಿರ ಪರಿಹಾರ ನೀಡಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿಯು ಪ್ರತ್ಯೇಕ ಪ್ರಕಟಣೆಯಲ್ಲಿ ತಿಳಿಸಿದೆ.
‘ಮೃತರ ಕುಟುಂಬಗಳಿಗೆ ತಲಾ ₹5 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರವನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿಧಿಯಿಂದ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಾವಂತ್ ಘೋಷಿಸಿದ್ದಾರೆ.
‘ಮೃತರ ದೇಹಗಳನ್ನು ಅವರ ಊರುಗಳಿಗೆ ತೆಗೆದುಕೊಂಡು ಹೋಗುವುದಕ್ಕೆ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದ್ದಾರೆ.ತಪ್ಪಿಸಬಹುದಾಗಿದ್ದ ದುರ್ಘಟನೆ ಇದೆ. ತುಂಬಲಾರದ ನಷ್ಟವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಉತ್ತರದಾಯಿತ್ವ ನಿಗದಿ ಮಾಡಬೇಕು
ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ
ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ದಿನಗಳಿವು. ಇಂಥ ಸಂದರ್ಭದಲ್ಲಿಯೇ ಅಗ್ನಿ ದುರಂತ ಘಟಿಸಿರುವುದು ದುರದೃಷ್ಟಕರ. ಘಟನೆ ಕುರಿತು ಮ್ಯಾಜಿಸ್ಟ್ರೇಟ್ ಅವರಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದುಪ್ರಮೋದ್ ಸಾವಂತ್, ಗೋವಾ ಮುಖ್ಯಮಂತ್ರಿ
ನಿಯಮ ಉಲ್ಲಂಘಿಸಿರುವ ನೈಟ್ ಕ್ಲಬ್ ವಿರುದ್ಧ ಸರ್ಕಾರ ಯಾಕೆ ಕೈಗೊಂಡಿಲ್ಲ. ಅಧಿಕಾರದಲ್ಲಿ ಮುಂದುವರಿಯಲು ಮುಖ್ಯಮಂತ್ರಿ ಸಾವಂತ್ ಅವರಿಗೆ ನೈತಿಕ ಹಕ್ಕು ಇಲ್ಲಅಮಿತ್ ಪಾಲೇಕರ್, ಎಎಪಿ ಗೋವಾ ಘಟಕದ ಅಧ್ಯಕ್ಷ
ಆಡಳಿತ ಮತ್ತು ಸುರಕ್ಷತೆ ವಿಚಾರದಲ್ಲಿ ಕ್ರಿಮಿನಲ್ ವೈಫಲ್ಯವಾಗಿದೆ. ಪಾರದರ್ಶಕ ಮತ್ತು ಸಮಗ್ರ ತನಿಖೆ ನಡೆಸಬೇಕು. ಇಂತಹ ದುರಂತಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕುರಾಹುಲ್ ಗಾಂಧಿ, ಲೋಕಸಭೆಯಲ್ಲಿ ವಿಪಕ್ಷ ನಾಯಕ
ತಪ್ಪಿಸಬಹುದಾಗಿದ್ದ ದುರ್ಘಟನೆ ಇದೆ. ತುಂಬಲಾರದ ನಷ್ಟವಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಉತ್ತರದಾಯಿತ್ವ ನಿಗದಿ ಮಾಡಬೇಕುಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ
ಭಯಾನಕ ದುರಂತವಿದು. ಈ ಘಟನೆ ಗಂಭೀರ ಲೋಪಗಳತ್ತ ಬೊಟ್ಟು ಮಾಡುತ್ತದೆ. ಇಂತಹ ನಿರ್ಲಕ್ಷ್ಯ ಪುನರಾವರ್ತನೆಯಾಗದ ರೀತಿ ಕ್ರಮ ತೆಗೆದುಕೊಳ್ಳಬೇಕುಎಂ.ಎ.ಬೇಬಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ
‘ವಾರದೊಳಗೆ ವರದಿ’
‘ಘಟನೆ ಕುರಿತು ತನಿಖೆ ನಡೆಸುವುದಕ್ಕೆ ದಕ್ಷಿಣ ಗೋವಾ ಜಿಲ್ಲಾಧಿಕಾರಿ, ಅಗ್ನಿ ಮತ್ತು ತುರ್ತುಸೇವೆಗಳ ಉಪನಿರ್ದೇಶಕ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ನಿರ್ದೇಶಕರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ’ ಎಂದು ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
‘ಈ ಸಮಿತಿಯು ವಾರದೊಳಗೆ ತನ್ನ ವರದಿ ಸಲ್ಲಿಸಿದೆ. ಈ ವಿಚಾರದಲ್ಲಿ ತಪ್ಪೆಸಗಿರುವ ಸರ್ಕಾರಿ ಅಧಿಕಾರಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ವಿ.ಕಂದವೇಲು ಹಾಗೂ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಆದೇಶಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ಕ್ಲಬ್ ನೆಲಸಮಕ್ಕೆ ನೋಟಿಸ್ ನೀಡಲಾಗಿತ್ತು’
‘ನಿಯಮ ಉಲ್ಲಂಘಿಸಿದ್ದ ಕಾರಣಕ್ಕೆ ನೈಟ್‌ಕ್ಲಬ್ ಅನ್ನು ನೆಲಸಮಗೊಳಿಸುವಂತೆ ಪಂಚಾಯಿತಿಯಿಂದ ನೋಟಿಸ್ ನೀಡಲಾಗಿತ್ತು. ಆದರೆ, ಅದನ್ನು ನೆಲಸಮಗೊಳಿಸದಂತೆ ಪಂಚಾಯಿತಿಗಳ ನಿರ್ದೇಶನಾಲಯ ಅಧಿಕಾರಿಗಳು ತಡೆ ನೀಡಿದ್ದರು’ ಎಂದು ಅರ್ಫೋರಾ–ನಗೋವಾ ಪಂಚಾಯಿತಿ ಸರಪಂಚ ರೋಷನ್ ರೆಡ್ಕರ್ ಹೇಳಿದ್ದಾರೆ.
‘ಸೌರವ್ ಲೂಥ್ರಾ ಎಂಬವರು ಈ ಕ್ಲಬ್ ನಡೆಸುತ್ತಿದ್ದಾರೆ. ಸೌರವ್ ಹಾಗೂ ಪಾಲುದಾರನ ಮಧ್ಯೆ ವಿವಾದ ಉಂಟಾಗಿತ್ತು. ಈ ಕಾರಣಕ್ಕೆ ಅವರು ಪರಸ್ಪರರ ವಿರುದ್ಧ ಪಂಚಾಯಿತಿಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ, ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಕ್ಲಬ್ ನಿರ್ಮಾಣಕ್ಕೆ ಅನುಮತಿಯನ್ನೇ ಪಡೆದಿರಲಿಲ್ಲ ಎಂಬುದು ಗೊತ್ತಾಗಿ, ಅದನ್ನು ನೆಲಸಮಗೊಳಿಸುವುದಕ್ಕೆ ಸೂಚಿಸಲಾಗಿತ್ತು’ ಎಂದು ರೆಡ್ಕರ್ ಹೇಳಿದ್ದಾರೆ.
ಪ್ರಮುಖ ಅಂಶಗಳು
ಅರ್ಫೋರಾ ನದಿ ಹಿನ್ನೀರಿನಲ್ಲಿ ನೈಟ್‌ಕ್ಲಬ್ ನಿರ್ಮಾಣ
ಕಿರಿದಾದ ಪ್ರವೇಶ ಹಾಗೂ ನಿರ್ಗಮನ ದ್ವಾರವಿದ್ದ ಕಾರಣ ಹಾನಿ ಜಾಸ್ತಿ
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ವಾಹನ ಹೋಗಲು ಅವಕಾಶವೇ ಇಲ್ಲ. ವಾಹನಗಳನ್ನು 400 ಮೀಟರ್ ದೂರದಲ್ಲಿಯೇ ನಿಲುಗಡೆ ಮಾಡುವುದು ಅನಿವಾರ್ಯ
ಗಾಯಾಳುಗಳಿಗೆ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಜಾರ್ಖಂಡ್, ಅಸ್ಸಾಂನಿಂದಲೂ ಬಂದಿರುವ ಪ್ರವಾಸಿಗರು.
ಜಾರ್ಖಂಡ್‌ನ ಇಬ್ಬರು ಸಹೋದರರು ಸೇರಿದಂತೆ ಮೂವರು ಸಾವು. ಈ ಮೂವರು ವಲಸೆ ಕಾರ್ಮಿಕರಾಗಿದ್ದರು.
ದಿಢೀರ್ ಬೆಂಕಿ... ಗದ್ದಲ–ನೂಕಾಟ
‘ಕ್ಲಬ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಾಗ ಗದ್ದಲ, ನೂಕಾಟ–ಚೀರಾಟ ಶುರುವಾಯಿತು. ನಾವು ಹೇಗೋ ಪಾರಾಗಿ ಹೊರಗೆ ಬಂದು ನೋಡಿದಾಗ ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿಕೊಂಡಿತ್ತು...’
–‘ಬರ್ಚ್ ಬೈ ರೋಮಿಯೊ ಲೇನ್’ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಪಾರಾಗಿರುವ, ಹೈದರಾಬಾದ್ ಮೂಲದ ಪ್ರವಾಸಿ ಫಾತಿಮಾ ಶೇಖ್ ಹೇಳುವ ಮಾತಿದು.
‘ವಾರಾಂತ್ಯವಾಗಿದ್ದ ಕಾರಣ ಕ್ಲಬ್ ಪ್ರವಾಸಿಗರಿಂದ ತುಂಬಿತ್ತು. ಕನಿಷ್ಠ 100 ಜನರು ಕ್ಲಬ್‌ನ ಮಹಡಿಯೊಂದರಲ್ಲಿ ನೃತ್ಯ ಮಾಡುತ್ತಿದ್ದರು. ಬೆಂಕಿ ಕಾಣಿಸಿಕೊಂಡಾಗ ಎಲ್ಲರೂ ಜೀವ ಉಳಿಸಿಕೊಳ್ಳಲು ಓಡಿದರು. ಕೆಲವರು ಕೆಳಮಹಡಿಯತ್ತ ಓಡಿ, ಅಲ್ಲಿದ್ದ ಅಡುಗೆ ಮನೆ ಸೇರಿದರು. ಅಲ್ಲಿಂದ ಹೊರಬರಲಾಗದೇ, ಸಿಕ್ಕಿಹಾಕಿಕೊಂಡರು’ ಎಂದು ಆ ಭೀಕರ ಕ್ಷಣಗಳನ್ನು ಫಾತಿಮಾ ಮೆಲುಕು ಹಾಕಿದರು.
‘ತಾತ್ಕಾಲಿಕ ಕಟ್ಟಡದಲ್ಲಿ ಕ್ಲಬ್‌ನ ಚಟುವಟಿಕೆಗಳು ನಡೆಯುತ್ತಿದ್ದವು. ಅಲ್ಲಿ ತಾಳೆ ಮರದ ಗರಿಗಳನ್ನು ಬಳಸಿ ನಿರ್ಮಾಣ ಮಾಡಿದ್ದರಿಂದ, ಆ ಕಟ್ಟಡ ಸುಲಭವಾಗಿ ಬೆಂಕಿಗೆ ಆಹುತಿಯಾಯಿತು’ ಎಂದೂ ವಿವರಿಸಿದರು.
ಮೃತರಲ್ಲಿ ಐವರು ಪ್ರವಾಸಿಗರು
ಬೆಂಕಿ ಅವಘಡದಲ್ಲಿ ಮೃತಪಟ್ಟವರ ಪೈಕಿ 20 ಜನರು ಕ್ಲಬ್‌ನ ಸಿಬ್ಬಂದಿ ಹಾಗೂ ಐವರು ಪ್ರವಾಸಿಗರು ಎಂದು ಗುರುತಿಸಲಾಗಿದೆ.
ಮೃತಪಟ್ಟಿರುವ ನಾಲ್ವರು ಪ್ರವಾಸಿಗರು ದೆಹಲಿಯವರಾಗಿದ್ದು, ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಮೃತ ಸಿಬ್ಬಂದಿ ಪೈಕಿ ಉತ್ತರಾಖಂಡದ ಐವರು, ನೇಪಾಳದ ನಾಲ್ವರು, ಜಾರ್ಖಂಡ್ ಮತ್ತು ಅಸ್ಸಾಂನ ತಲಾ ಮೂವರು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ತಲಾ ಇಬ್ಬರು ಹಾಗೂ ಪಶ್ಚಿಮ ಬಂಗಾಳದ ಒಬ್ಬರು ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.