ಪಣಜಿ: ಗೋವಾದ ಜನ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಸರ್ಕಾರ ಬೇಕೆಂದು ಆಶಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷವು ಗೋವಾದ ವಿಶೇಷ ವೀಕ್ಷಕರನ್ನಾಗಿ ನಿಯೋಜಿಸಿದ್ದು, ಅವರು ಈಗಾಗಲೇ ಗೋವಾಕ್ಕೆ ತೆರಳಿದ್ದಾರೆ.
ಮತ ಎಣಿಕೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಪಕ್ಷದ ಯಾವೊಬ್ಬ ಅಭ್ಯರ್ಥಿಯೂ ಶಿಬಿರದಿಂದ ಹೊರಹೋಗಲ್ಲ. ನಮ್ಮೆಲ್ಲ ಅಭ್ಯರ್ಥಿಗಳೂ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಅವರೆಲ್ಲ ಜತೆಯಾಗಿದ್ದಾರೆ. ನಾವೆಲ್ಲ ಅವರಿಗೆ ಸಹಾಯಕ್ಕಾಗಿ ಕರ್ನಾಟಕದಿಂದ ಬಂದಿದ್ದೇವೆ ಎಂದು ಹೇಳಿದ್ದಾರೆ.
ಗೋವಾದಲ್ಲಿ ಅತಂತ್ರ ವಿಧಾನಸಭೆ ಏರ್ಪಡಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ, ಮಂಗಳವಾರವೇ ಅಲ್ಲಿ ರಾಜಕೀಯ ಚುಟುವಟಿಕೆಗಳು ಬಿರುಸುಗೊಂಡಿದ್ದವು. ಅದೇ ದಿನ ಸಂಜೆ ಡಿ.ಕೆ. ಶಿವಕುಮಾರ್ ಗೋವಾಕ್ಕೆ ತೆರಳಿದ್ದರು. ಫಲಿತಾಂಶ ಘೋಷಣೆಗೂ ಮುನ್ನ, ಅಭ್ಯರ್ಥಿಗಳನ್ನು ರೆಸಾರ್ಟ್‌ಗೆ ಸ್ಥಳಾಂತರಿಸಲು ಕಾಂಗ್ರೆಸ್ ಮುಂದಾಗಿತ್ತು.
ಸದ್ಯ ಗೋವಾ ಮತ ಎಣಿಕೆ ಪ್ರಗತಿಯಲ್ಲಿದ್ದು, ಬೆಳಿಗ್ಗೆ 10.50ರ ವೇಳೆಗೆ ಬಿಜೆಪಿ 18 ಹಾಗೂ ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಇತರರು 8 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.