ADVERTISEMENT

ಅನ್ನಪೂರ್ಣ ದೇವಿ ವಿಗ್ರಹ ವಾರಾಣಸಿಯ ಕಾಶಿವಿಶ್ವನಾಥ ದೇವಾಲಯಕ್ಕೆ

ಪಿಟಿಐ
Published 3 ನವೆಂಬರ್ 2021, 6:25 IST
Last Updated 3 ನವೆಂಬರ್ 2021, 6:25 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೆನಡಾದ ಒಟ್ಟಾವದಿಂದ ಹಿಂಪಡೆದಿರುವ ಅನ್ನಪೂರ್ಣ ದೇವಿಯ ವಿಗ್ರಹವನ್ನು, ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ದೇವಾಲಯದಲ್ಲಿ ಇರಿಸಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಮಂಗಳವಾರ ತಿಳಿಸಿದೆ.

ಅನ್ನಪೂರ್ಣ ದೇವಿಯ ಮೂರ್ತಿಯನ್ನು ನವೆಂಬರ್ 11 ರಂದು ದೆಹಲಿಯಿಂದ ಅಲೀಗಡಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿಂದ ನವೆಂಬರ್ 12 ರಂದು ಕನೌಜ್‌ಗೆ ಕೊಂಡೊಯ್ಯಲಾಗುತ್ತದೆ. ನಂತರ ಅದು ನವೆಂಬರ್ 14 ರಂದು ಅಯೋಧ್ಯೆ ತಲುಪಲಿದೆ ಎಂದು ಸಚಿವಾಲಯ ತಿಳಿಸಿದೆ. ಅಂತಿಮವಾಗಿ ನವೆಂಬರ್ 15 ರಂದು ವಾರಾಣಸಿ ತಲುಪಲಿರುವ ಅನ್ನಪೂರ್ಣ ದೇವಿ ವಿಗ್ರಹವನ್ನು ಸೂಕ್ತ ಧಾರ್ಮಿಕ ವಿಧಿ ವಿಧಾನಗಳ ನಂತರ ಅಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಇರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಡಿಒಎನ್‌ಇಆರ್‌ ಸಚಿವ ಜಿ.ಕಿಶನ್ ರೆಡ್ಡಿ ಅವರು ಬುಧವಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದಲ್ಲಿ, ವಿಗ್ರಹವನ್ನು ಹಿಂಪಡೆದು, ದೇಶಕ್ಕೆ ತಂದ ಪ್ರಕ್ರಿಯೆ ಮತ್ತುವಿವಿಧ ದೇಶಗಳಲ್ಲಿರುವ ವಿಗ್ರಹಗಳು ಮತ್ತು ಪುರಾತನ ವಸ್ತುಗಳನ್ನು ವಾಪಸ್ ನಮ್ಮ ದೇಶಕ್ಕೆ ತಂದಿರುವ ಕುರಿತು ಮಾಹಿತಿ ನೀಡಿದರು.

ADVERTISEMENT

1976ರಿಂದ ಇಲ್ಲಿವರೆಗೆ ಸುಮಾರು 55 ವಿಗ್ರಹಗಳನ್ನು ವಿದೇಶಗಳಿಂದ ಭಾರತಕ್ಕೆ ಹಿಂತಿರುಗಿಸಲಾಗಿದೆ. ಇದರಲ್ಲಿ ಶೇ 75ರಷ್ಟು ವಿಗ್ರಹಗಳು ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಅವಧಿಯಲ್ಲಿ ದೇಶಕ್ಕೆ ಮರಳಿವೆ ಎಂದು ಸಚಿವಾಲಯ ತಿಳಿಸಿದೆ.

ಹಿಂದಿರುಗಿ ಬಂದಿರುವ 55 ಪುರಾತತ್ವ ಮೌಲ್ಯದ ವಸ್ತುಗಳಲ್ಲಿ ಅನ್ನಪೂರ್ಣ ದೇವಿ ವಿಗ್ರಹವೂ ಸೇರಿದಂತೆ ಒಟ್ಟು 42 ವಿಗ್ರಹಗಳು 2014ರಿಂದ ಈಚೆಗೆ ದೇಶಕ್ಕೆ ಮರಳಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.