ಗುಂಡಿಕ್ಕಿ ಕೊಲೆ
ಬೊಕರೊ (ಜಾರ್ಖಂಡ್): 26ವರ್ಷದ ರಾಜ್ಯ ಸರ್ಕಾರಿ ನೌಕರರೊಬ್ಬರನ್ನು ಆಗಂತುಕರು ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಜಾರ್ಖಂಡ್‌ನ ಬೊಕರೊ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಕಶ್ಮರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಧುಕಪುರ ಗ್ರಾಮದಲ್ಲಿರುವ ಮನೆಯಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪಿಂಟು ನಾಯಕ್ ಮೃತ ನೌಕರ. ಹಾಜಾರಿಬಾಗ್ ಜಿಲ್ಲೆಯಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು.
ಪಿಂಟು ತಮ್ಮ ಕುಟುಂಬಸ್ಥರನ್ನು ಭೇಟಿ ಮಾಡಲು ಮನೆಗೆ ಬಂದಿದ್ದ ವೇಳೆ ಕೊಲೆ ಮಾಡಲಾಗಿದೆ ಎಂದು ಬೆರ್ಮೊ ಉಪವಿಭಾಗೀಯ ಪೊಲೀಸ್ ಅಧಿಕಾರಿ ಬಿ.ಎಸ್ ಸಿಂಗ್ ತಿಳಿಸಿದ್ದಾರೆ.
‘ರಾತ್ರಿ ಊಟ ಮುಗಿಸಿ ಮಲಗಲು ತನ್ನ ಕೋಣೆಗೆ ಹೋಗುವಾಗ ಈ ಘಟನೆ ನಡೆದಿದೆ. ಗಂಟೆ ಸುಮಾರು 11 ಆಗಿರಬಹುದು. ಗುಂಡಿನ ಸದ್ದು ಕೇಳಿ ಬಂದ ಕೂಡಲೇ ಪಿಂಟು ಕೋಣೆಗೆ ಧಾವಿಸಿದೆ. ಅಲ್ಲಿ ಮಂಚದ ಮೇಲೆ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ’ ಎಂದು ಪಿಂಟು ತಂದೆ ಸಕುಲ್ ನಾಯಕ್ ತಿಳಿಸಿದ್ದಾರೆ.
ಕೂಡಲೇ ಕುಟುಂಬ ಸದಸ್ಯರು ಪಿಂಟು ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ದಾರಿ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಘಟನೆ ಬಗ್ಗೆ ತನಿಖೆ ಪ್ರಗತಿಯಲ್ಲಿದೆ. ಸ್ಥಳೀಯ ನಿವಾಸಿಗಳನ್ನು ವಿಚಾರಣೆ ಮಾಡಲಾಗುತ್ತಿದೆ. ಘಟನೆ ನಡೆದ ಸ್ಥಳದಿಂದ ಕೆಲವೊಂದು ಸಾಕ್ಷ್ಯ ಸಂಗ್ರಹಿಸುವ ಕೆಲಸವೂ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.