ADVERTISEMENT

ಕೊರತೆ ನೀಗಿಸಲು ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಗೆ ಇತರೆ ಕಂಪನಿಗಳಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 13 ಮೇ 2021, 17:01 IST
Last Updated 13 ಮೇ 2021, 17:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆಗಸ್ಟ್–ಡಿಸೆಂಬರ್ ನಡುವೆ 200 ಕೋಟಿ ಲಸಿಕೆ ಸಿಗುವ ವಿಶ್ವಾಸವಿದೆ ಎಂದು ಕೇಂದ್ರ ಸರ್ಕಾರ ಹೇಳಿದ ಬೆನ್ನಲ್ಲೇ ಲಸಿಕೆ ಕೊರತೆ ನೀಗಿಸಲು ಕೊವ್ಯಾಕ್ಸಿನ್ ಲಸಿಕೆ ಉತ್ಪಾದಿಸಲು ಮುಂದೆ ಬರುವ ಇತರೆ ಕಂಪನಿಗಳಿಗೆ ಆಹ್ವಾನ ನೀಡಲು ಕೇಂದ್ರ ಸರ್ಕಾರ ಮತ್ತು ಭಾರತ್ ಬಯೋಟೆಕ್ ಇಚ್ಛಿಸಿವೆ ಎಂದು ಸರ್ಕಾರದ ಉನ್ನತ ಸಲಹೆಗಾರರೊಬ್ಬರು ಗುರುವಾರ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

‘ಈ ಲಸಿಕೆ ತಯಾರಿಕೆ ವೇಳೆ, ಜೀವಂತ ವೈರಸ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಹೀಗಾಗಿ, ಇದನ್ನು ಬಿಎಸ್ಎಲ್ 3 (ಜೈವಿಕ ಸುರಕ್ಷತೆ ಮಟ್ಟ 3) ಲ್ಯಾಬ್‌ಗಳಲ್ಲಿ ಮಾತ್ರ ಮಾಡಲಾಗುತ್ತದೆ. ಪ್ರತಿ ಕಂಪನಿಯು ಇದನ್ನು ಹೊಂದಿಲ್ಲ. ಲಸಿಕೆ ತಯಾರಿಸಲು ಬಯಸುವ ಕಂಪನಿಗಳಿಗೆ ನಾವು ಮುಕ್ತ ಆಹ್ವಾನವನ್ನು ನೀಡುತ್ತೇವೆ. ಅಂತಹ ಕಂಪನಿಗಳಿಗೆ ಕೇಂದ್ರವು ನೆರವು ನೀಡುತ್ತದೆ. ಇದರಿಂದ ಲಸಿಕೆಯ ಲಭ್ಯತೆ ಹೆಚ್ಚಾಗುತ್ತದೆ’ ಎಂದು ಡಾ ಪಾಲ್ ಹೇಳಿದ್ದಾರೆ.

ಗುರುವಾರ ದೇಶದಲ್ಲಿ 4 ಲಕ್ಷಕ್ಕಿಂತಲೂ ಕಡಿಮೆ ಸೋಂಕು ಪ್ರಕರಣಗಳು ದಾಖಲಾಗಿದ್ದು, 4,000 ಕ್ಕಿಂತ ಹೆಚ್ಚು ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಈ ಮಧ್ಯೆ, ಲಸಿಕೆ ಕೊರತೆ ಹಿನ್ನೆಲೆಯಲ್ಲಿ ಅಸ್ಟ್ರಾಜೆನೆಕಾ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು 16 ವಾರಗಳವರೆಗೆ ವಿಸ್ತರಿಸಲಾಗಿದೆ.

ADVERTISEMENT

ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದಕ ದೇಶವಾಗಿದ್ದರೂ ಸಹ ಭಾರತದಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಅದಕ್ಕೆ ತಕ್ಕಷ್ಟು ಲಸಿಕೆ ಪೂರೈಕೆ ಮಾಡಲಾಗುತ್ತಿಲ್ಲ. ಗುರುವಾರದವರೆಗೆ 3.82 ಕೋಟಿ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. 135 ಕೋಟಿ ಜನಸಂಖ್ಯೆಯ ದೇಶದಲ್ಲಿ ಈವರೆಗೆ ಶೇ. 2.8ರಷ್ಟು ಮಾತ್ರ ಲಸಿಕೆ ಅಭಿಯಾನ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.