ADVERTISEMENT

ಎಲ್‌ಇಟಿಯ ಮೊಹಮ್ಮದ್‌ ಖಾಸಿಂ ಗುಜ್ಜರ್‌ ಭಯೋತ್ಪಾದಕ: ಕೇಂದ್ರ ಘೋಷಣೆ

ಪಿಟಿಐ
Published 7 ಮಾರ್ಚ್ 2024, 23:30 IST
Last Updated 7 ಮಾರ್ಚ್ 2024, 23:30 IST
<div class="paragraphs"><p>ಲೋಕಸಭೆ</p></div>

ಲೋಕಸಭೆ

   

ನವದೆಹಲಿ: ದೇಶದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳ ಪ್ರಮುಖ ಸೂತ್ರಧಾರಿ ಲಷ್ಕರ್‌ –ಎ –ತಯಬಾ (ಎಲ್‌ಇಟಿ) ಸಂಘಟನೆಯ ಸದಸ್ಯ ಮೊಹಮ್ಮದ್‌ ಖಾಸಿಂ ಗುಜ್ಜರ್‌ನನ್ನು ಭಯೋತ್ಪಾದಕನೆಂದು ಕೇಂದ್ರ ಸರ್ಕಾರ ಗುರುವಾರ ಘೋಷಿಸಿದೆ. 

ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಎಲ್‌ಇಟಿ ಸದಸ್ಯ ಗುಜ್ಜರ್‌ ಭಾರತ ವಿರೋಧಿ ಯುದ್ಧ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಆತ ಭಯೋತ್ಪಾದಕ ದಾಳಿಗಳ ಮೂಲಕ ಹಲವು ಮಂದಿಯ ಸಾವು–ನೋವುಗಳಿಗೆ ಕಾರಣವಾಗಿದ್ದಾನೆ ಎಂದು ಹೇಳಿದ್ದಾರೆ.

ADVERTISEMENT

‘ರಾಷ್ಟ್ರದ ಏಕತೆ ಮತ್ತು ಸಮಗ್ರತೆಗೆ ವಿರುದ್ಧವಾದ ಚಟುವಟಿಕೆಯಲ್ಲಿ ಯಾರೇ ತೊಡಗಿಸಿಕೊಂಡರೂ ಅವರ ಮೇಲೆ ನಿರ್ದಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಶಾ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಖಾಸಿಂ ಗುಜ್ಜರ್‌, ಯುಎಪಿಎ ಕಾಯ್ದೆಯಡಿ ವ್ಯಕ್ತಿಗತವಾಗಿ ಭಯೋತ್ಪಾದಕನೆಂದು ಘೋಷಿಸಲಾದ 57ನೇ ವ್ಯಕ್ತಿಯಾಗಿದ್ದಾನೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯವನಾದ, ಪ್ರಸ್ತುತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನೆಲೆಸಿರುವ 32 ವರ್ಷದ ಗುಜ್ಜರ್ ನಿಷೇಧಿತ ಸಂಘಟನೆ ಎಲ್‌ಇಟಿಗೆ ಸೇರಿದವನು ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಿದೆ.

ಅಧಿಸೂಚನೆಯ ಪ್ರಕಾರ, ಗುಜ್ಜರ್ ಅಲಿಯಾಸ್ ಸಲ್ಮಾನ್ ಅಲಿಯಾಸ್ ಸುಲೇಮಾನ್ ದೇಶದ ವಿರುದ್ಧ ಯುದ್ಧ ಮಾಡುವ ಉದ್ದೇಶದಿಂದ ವ್ಯಾಪಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಗಡಿಯಲ್ಲಿ ಉಗ್ರರೊಂದಿಗೆ ಸಮನ್ವಯ ಸಾಧಿಸುವುದು, ಅವರಿಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕ ಸಾಧನಗಳು ಮತ್ತು ನಗದನ್ನು ಡ್ರೋನ್‌ ಮೂಲಕ ಪೂರೈಸುವ ಕೆಲಸದಲ್ಲಿ ತೊಡಗಿದ್ದ. ಅಲ್ಲದೆ, ಸಾಮಾಜಿಕ ಮಾಧ್ಯಮ ಮತ್ತು ಇನ್ನಿತರ ಆನ್‌ಲೈನ್‌ನಲ್ಲಿ ರಹಸ್ಯ ಅಪ್ಲಿಕೇಶನ್‌ಗಳ ಮೂಲಕ ಭಯೋತ್ಪಾದಕರ ನೇಮಕ ನಡೆಸುವುದರಲ್ಲೂ ಭಾಗಿಯಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.