ಕೇಜ್ರಿವಾಲ್ ಭೇಟಿಯಾದ ಆದಿತ್ಯ ಠಾಕ್ರೆ
ನವದೆಹಲಿ: ಮಹಾರಾಷ್ಟ್ರದಲ್ಲಿನ ಪ್ರತಿಪಕ್ಷಗಳ ಕೂಟ ಮಹಾ ವಿಕಾಸ್ ಆಘಾಡಿ (ಎಂವಿಎ) ಭಾಗವಾಗಿದ್ದ ಎನ್‌ಸಿಪಿ (ಶರದ್ ಪವಾರ್ ಬಣ) ಮುಖ್ಯಸ್ಥ ಶರದ್ ಪವಾರ್ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಸನ್ಮಾನ ಮಾಡಿದ ಬೆನ್ನಲ್ಲೇ, ಶಿವಸೇನಾ (ಉದ್ಧವ್ ಠಾಕ್ರೆ ಬಣ) ಮುಖಂಡ ಆದಿತ್ಯ ಠಾಕ್ರೆ ಅವರು ಬುಧವಾರ ರಾತ್ರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಗುರುವಾರ ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ, ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು.
ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ, ಇದು ‘ಸ್ನೇಹದ ಸಂಕೇತ’ ಎಂದು ಬಣ್ಣಿಸಿದ ಠಾಕ್ರೆ, ಚುನಾವಣಾ ಅಕ್ರಮಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು.
‘ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ, ಸಂಬಂಧಗಳು ಮುಂದುವರಿಯುತ್ತವೆ. ಸ್ನೇಹದ ಸಂಕೇತವಾಗಿ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದೆ. ಆದರೆ, ನಮ್ಮ ಪ್ರಜಾಪ್ರಭುತ್ವವು ಮುಕ್ತ ಮತ್ತು ನ್ಯಾಯಸಮ್ಮತವಾಗಿಲ್ಲ. ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿಲ್ಲ’ ಎಂದು ಆರೋಪಿಸಿದರು. ಈ ಭೇಟಿ ಸಂದರ್ಭದಲ್ಲಿ ಶಿವಸೇನಾ (ಯುಬಿಟಿ) ಮುಖಂಡರಾದ ಸಂಜಯ್ ರಾವುತ್, ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಇತರರು ಹಾಜರಿದ್ದರು. ಇತ್ತೀಚೆಗಷ್ಟೇ ಫಲಿತಾಂಶ ಕಂಡ ದೆಹಲಿ ವಿಧಾನಸಭೆ ಚುನಾವಣೆ ಮತ್ತು ‘ಇಂಡಿಯಾ’ ಒಕ್ಕೂಟದ ಸ್ಥಿತಿ–ಗತಿಯ ಕುರಿತು ಬಗ್ಗೆ ಚರ್ಚೆ ನಡೆದಿದೆ ಎಂದು ಗೊತ್ತಾಗಿದೆ.
ದೆಹಲಿ, ಒಡಿಶಾ, ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಮತದಾರರ ಪಟ್ಟಿಯನ್ನು ತಿರುಚಲಾಗಿದೆ. ಈ ಮೂಲಕ ಚುನಾವಣಾ ಆಯೋಗವು ಮತದಾನ ಮಾಡುವ ಜನರ ಹಕ್ಕನ್ನು ಕಸಿದುಕೊಂಡಿದೆ. ಈ ವಿಚಾರದ ಬಗ್ಗೆ ಆಯೋಗ ಚರ್ಚೆಗೆ ಸಿದ್ಧವಿಲ್ಲ. ಈ ಕುರಿತು ಪ್ರತಿಪಕ್ಷವು ಧ್ವನಿ ಎತ್ತಲಿದೆ ಎಂದು ಆದಿತ್ಯ ಠಾಕ್ರೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.