
ಪಶ್ಚಿಮ ಘಟ್ಟಗಳ ಹೃದಯ ಭಾಗ ಆಗುಂಬೆಯಲ್ಲಿ ನಿರ್ಮಾಣವಾಗಲಿರುವ ಸುರಂಗ ಹೆದ್ದಾರಿ ಅಲ್ಲಿನ ಪರಿಸರ ನಾಶಕ್ಕೆ ಕಾರಣವಾಗಲಿದೆ ಎಂದು ಪರಿಸರವಾದಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಭಾರತದ ಪ್ರಮುಖ ಕೇಂದ್ರಾಡಳಿತ ಪ್ರದೇಶ ನಿಕೋಬಾರ್‌ನಲ್ಲಿ ಇಂಥದ್ದೇ ಒಂದು ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ದೊರೆತಿದೆ. ಅಷ್ಟಕ್ಕೂ ಭಾರತ ಅಲ್ಲಿ ಕೈಗೊಳ್ಳಲು ಹೊರಟಿರುವ ಗ್ರೇಟ್ ನಿಕೋಬಾರ್ ಪ್ರಾಜೆಕ್ಟ್‌ನ ಸಾಧಕ ಬಾಧಕಗಳೇನು, ಇದರಿಂದ ಭಾರತಕ್ಕಾಗುವ ಲಾಭಗಳೇನು? ಪರಿಸರವಾದಿಗಳ ವಿರೋಧಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರ 2023ರಲ್ಲಿ ನಿಕೋಬಾರ್ ದ್ವೀಪದಲ್ಲಿ ಯೋಜನೆಯೊಂದನ್ನು ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿತ್ತು. ಈ ದ್ವೀಪದಲ್ಲಿ ಅಂತರರಾಷ್ಟೀಯ ಮಟ್ಟದ ಕಂಟೇನರ್ ಟ್ಯಾನ್ಸ್‌ಶಿಪ್‌ಮೆಂಟ್ (ಹಡಗುಗಳು ನಿಲ್ಲುವ ಸ್ಥಳ), ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಟೌನ್ ಶಿಪ್, 450 ಮೆಗಾವಾಟ್ ಅನಿಲ ಹಾಗೂ ಸೌರ ಆಧಾರಿತ ವಿದ್ಯುತ್ ಘಟಕವನ್ನು ಸ್ಥಾಪಿಸಲು ಸುಮಾರು ₹92 ಸಾವಿರ ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಪರಿಸರವಾದಿಗಳು ಈ ಯೋಜನೆಯಿಂದಾಗಿ ದ್ವೀಪ ಕರಾವಳಿ ವಲಯ ಅಧಿಸೂಚನೆ (ಐಸಿಆರ್‌ಝಡ್) ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಭಾರತದ ಆರ್ಥಿಕತೆ ಹಾಗೂ ರಕ್ಷಣಾ ದೃಷ್ಟಿಯಿಂದ ಇದು ಅನಿವಾರ್ಯವಾಗಿದ್ದು, ಯೋಜನೆ ಶುರುಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅನುಮತಿ ನೀಡಿದೆ. ಜತೆಗೆ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸಲು ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ಭಾರತಕ್ಕೆ ರಾಜಕೀಯ ಮತ್ತು ರಕ್ಷಣಾ ದೃಷ್ಟಿಯಿಂದ ತುಂಬಾ ಆಯಾಕಟ್ಟಿನ ಸ್ಥಳವಾಗಿದೆ. ಹಿಂದೂ ಮಹಾಸಾಗರದಲ್ಲಿ ಭಾರತ ತನ್ನ ಪಾರಮ್ಯ ಸಾಧಿಸಲು ಈ ಯೋಜನೆ ಸಹಕಾರಿಯಾಗಲಿದೆ. ಅಲ್ಲದೇ ಈ ಯೋಜನೆ ಮಲಕ್ಕಾ ಜಲಸಂಧಿಗೆ ಸಮೀಪವಿರುವ ನಿಕೋಬಾರ್‌ನಲ್ಲಿ ರೂಪುಗೊಳ್ಳಲಿದೆ. ಮಲಕ್ಕಾ ಜಲಸಂಧಿಯ ಮಾರ್ಗ ಜಾಗತಿಕ ಸಮುದ್ರ ವ್ಯಾಪಾರದ ಹೆಚ್ಚು ಬ್ಯುಸಿ ಮಾರ್ಗಗಳಲ್ಲಿ ಒಂದಾಗಿದೆ. ಈ ಜಲಸಂಧಿ ಮೂಲಕ ಜಗತ್ತಿನ ಶೇ 25 ರಿಂದ 30 ರಷ್ಟು ಸಮುದ್ರ ಮಾರ್ಗದ ವ್ಯಾಪಾರ ನಡೆಯುತ್ತಿದೆ. ಈ ಮಾರ್ಗ ಮಧ್ಯಪ್ರಾಚ್ಯದಿಂದ ಪೂರ್ವ ಏಷ್ಯಾದ ದೇಶಗಳಿಗೆ ತೈಲ ಸರಬರಾಜಿನ ಪ್ರಮುಖ ಮಾರ್ಗವಾಗಿದೆ. ಚೈನಾದಿಂದ ಸರಕುಗಳು ಈ ಮಾರ್ಗದಿಂದಲೇ ಇತರೆ ಭಾಗಗಳಿಗೆ ತಲುಪುತ್ತವೆ. ಚೈನಾದ ದೃಷ್ಟಿಯಿಂದಲೂ ಭಾರತಕ್ಕೆ ಅನುಕೂಲವಾಗಲಿದೆ. ಈ ಯೋಜನೆಯಿಂದ ಭಾರತದ ನೀಲಿ ಆರ್ಥಿಕತೆ ಹೆಚ್ಚಲಿದೆ ಎಂದು ತಜ್ಞರು ಹೇಳುತ್ತಾರೆ.
ಗ್ರೇಟ್ ನಿಕೋಬಾರ್‌ನ ಯೋಜನೆಯಲ್ಲಿ ಸುಮಾರು 160 ಚದರ ಕಿ.ಮೀ.ಗಿಂತ ಹೆಚ್ಚು ಭೂಮಿಯನ್ನು ವಿವಿಧ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗುತ್ತದೆ. ಆ ಪೈಕಿ 130 ಚದರ ಕಿ.ಮೀ.ನಷ್ಟು ದಟ್ಟವಾದ ಪ್ರಾಚೀನ ಕಾಡಿದೆ. ಜತೆಗೆ ಸುಮಾರು 200–300ರಷ್ಟು ಜನಸಂಖ್ಯೆಯಿರುವ ಪರಿಶಿಷ್ಟ ಪಂಗಡವಾದ ನಿಕೋಬಾರಿಗಳು ವಾಸಿಸುತ್ತಿದ್ದಾರೆ. ಈ ಯೋಜನೆ ಹೆಸರಿನಲ್ಲಿ ಸುಮಾರು 9 ಲಕ್ಷ ಮರಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದ್ದು, ಈ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ. ಇದು ಇಲ್ಲಿನ ಜೀವ ವೈವಿಧ್ಯತೆ ಹಾಗೂ ಸಸ್ಯ ಪ್ರಬೇಧಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಅಲ್ಲದೇ ಅವಳದ ದ್ವೀಪಗಳಿಗೂ ದಕ್ಕೆ ಉಂಟಾಗಲಿದೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ.
ನಿಕೋಬಾರ್ ಕಡಲ ತೀರ
ಇತ್ತೀಚೆಗೆ ಕೇಂದ್ರ ಸರ್ಕಾರದ ನಿಕೋಬಾರ್ ದ್ವೀಪಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ದೇಶೀಯ ಪ್ರವಾಸೋದ್ಯಮ ವೆಚ್ಚ ಸಮೀಕ್ಷೆಯನ್ನು ಲೆಕ್ಕಹಾಕಿದೆ. ಇದರ ಅಡಿಯಲ್ಲಿ ನಿಕೋಬಾರ್‌ನಲ್ಲಿ ಉತ್ತಮ ಪ್ರವಾಸೋದ್ಯಮ ನೀತಿಗಳು, ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸು ಗುರಿ ಹೊಂದಿದೆ. ಇಲ್ಲಿನ ಖರ್ಚು ವೆಚ್ಚ, ವಸತಿ, ಸಾರಿಗೆ, ಆಹಾರ ಮತ್ತು ಪ್ರವಾಸಿಗರ ವಿವರ ಸೇರಿದಂತೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದು, ಪ್ರವಾಸೋದ್ಯಮದ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. 2025ರಲ್ಲಿ ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಬರುವ ಪ್ರವಾಸಿಗರ ಸಂಖ್ಯೆ 6 ಲಕ್ಷ ದಾಟಿದೆ.
ಸದ್ಯ ಏಷ್ಯಾದ ಸಮುದ್ರ ಮಾರ್ಗದ ಸರಕು ಸಾಗಣಿಕೆಯಲ್ಲಿ ತೈವಾನ್, ದಕ್ಷಿಣ ಕೊರಿಯಾ, ಸಿಂಗಾಪುರ ಮತ್ತು ಹಾಂಕಾಂಗ್‌ಗಳು ಏಷ್ಯಾದ 4 ಟೈಗರ್ಸ್ ಎಂದು ಗುರುತಿಸಿಕೊಂಡಿವೆ. ಈ ದೇಶಗಳ ಆರ್ಥಿಕತೆ ಬಹುಪಾಲು ಇದರ ಮೇಲೆಯೇ ಅವಲಂಭಿತವಾಗಿದೆ. ಈ ದೇಶಗಳಲ್ಲಿ ಟ್ಯಾನ್ಸ್‌ಶಿಪ್‌ಮೆಂಟ್ ಬಂದರುಗಳಿವೆ. ಇಲ್ಲಿ ವಿಶ್ವದ ನಾನಾ ದೇಶಗಳ ಹಡಗುಗಳು ಬಂದು ನಿಲ್ಲುತ್ತವೆ. ಹಡಗುಗಳಿಗೆ ಬೇಕಾದ ಸರ್ವೀಸ್ ಸೇವೆಗಳು, ನೌಕರರಿಗೆ ವಿಶ್ರಾಂತಿ ಸೇರಿದಂತೆ ಇಲ್ಲಿಂದ ವಿವಿಧ ದೇಶಗಳಿಗೆ ಸರಕುಗಳನ್ನು ಸಾಗಾಣಿಕೆ ಮಾಡಲಾಗುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದ ಬಾಡಿಗೆ ದೊರೆಯುತ್ತದೆ. ಇದೀಗ ಈ ಮಾದರಿಯ ಬಂದರು ನಿಕೋಬಾರ್‌ನಲ್ಲಿ ನಿರ್ಮಾಣವಾಗಲಿದೆ.
ಈ ಯೋಜನೆ ಸಲುವಾಗಿ ಸಾವಿರಾರು ಮಂದಿ ನಿಕೋಬಾರ್‌ನಲ್ಲಿ ವಾಸ್ತವ್ಯ ಹೂಡುತ್ತಾರೆ. ಅವರಿಗಾಗಿ ಪ್ರತ್ಯೇಕ ವಸತಿ ಗೃಹಗಳ ನಿರ್ಮಾಣ ಮಾಡಬೇಕು. ಇದರಿಂದಾಗಿ ಇನ್ನೂ ಹೆಚ್ಚಿನ ಪ್ರಮಾಣದ ಅರಣ್ಯ ನಾಶವಾಗಬಹುದು. ಅಲ್ಲಿ ಈಗಾಗಲೇ ವಾಸವಿರುವ ಶಾಂಪೆನ್ ಮತ್ತು ನಿಕೋಬಾರಿ ಬುಡಕಟ್ಟು ಜನರೊಂದಿಗೆ ಜನಾಂಗೀಯ ಸಂಘರ್ಷ ಉಂಟಾಗಬಹುದು. ಅವರ ಆಚರಣೆ ಹಾಗೂ ಅಸ್ತಿತ್ವಕ್ಕೆ ಧಕ್ಕೆ ಉಂಟಾಗಬಹುದು. ಅವರ ಮಧ್ಯೆ ಮೂಲ ಮತ್ತು ವಲಸಿಗ ಎಂಬ ಜಗಳ ಶುರುವಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಸಮುದ್ರ ಆಮೆಗಳ ರಕ್ಷಣೆ, ನಿಕೋಬಾರ್ ಮೆಗಾಪೊಡ್ ಹಕ್ಕಿಗಳ ರಕ್ಷಣೆ, ಉಪ್ಪು ನೀರಿನ ಮೊಸಳೆ, ಸ್ಥಳೀಯ ಸಸ್ಯವರ್ಗಗಳ ರಕ್ಷಣೆ, ನಿಕೋಬಾರ್ ಉದ್ದ ಬಾಲದ ಮಂಗಗಳು, ನಿಕೋಬಾರ್ ಏಡಿಗಳು, ನಿಕೋಬಾರ್ ದ್ವೀಪದ ಸ್ಥಳೀಯ ಹಕ್ಕಿಗಳು, ಮ್ಯಾಂಗ್ರೋವ್ ಕಾಡುಗಳ ಪುನರ್ ಸ್ಥಾಪನೆ, ಹವಳದ ಸ್ಥಳಾಂತರ, ಶೋಂಪೆನ್ ಹಾಗೂ ನಿಕೋಬಾರಿ ದ್ವೀಪಗಳ ಬುಡಕಟ್ಟು ಸಮುದಾಯದವರ ಕಲ್ಯಾಣ ಕಾರ್ಯಕ್ರಮಗಳಿಗೆ ಆದ್ಯತೆ. ದ್ವೀಪದ ಕರಾವಳಿ ರಕ್ಷಣೆ, ಆಮೆ ಹಾಗೂ ಹಕ್ಕಿಗಳ ಗೂಡು, ಮೊಟ್ಟೆಗಳ ರಕ್ಷಣೆ ನಿಟ್ಟಿನಲ್ಲಿ ಮರಳಿನ ಕಡಲ ತೀರಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಇದು ತಪ್ಪಿದ್ದಲ್ಲಿ ಕಠಿಣ ಕ್ರಮ ಜಾರಿ ಮಾಡುವಂತೆ ನ್ಯಾಯಾಲಯ ಹೆಚ್ಚರಿಸಿದೆ.
ಇಲ್ಲಿ ನಾಶವಾಗುವ ಅರಣ್ಯವನ್ನು ಹರಿಯಾಣ ಮತ್ತು ಇತರೆ ಅಂಡಮಾನ್ ದ್ವೀಪಗಳಲ್ಲಿ ಮರು ಅರಣೀಕರಣ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಮೂಲ; ಪಿಟಿಐ ,ಏಜೇನ್ಸಿಸ್
ಅರಣ್ಯ ಪ್ರದೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.