ಜಿಎಸ್‌ಬಿ ಸೇವಾ ಮಂಡಲ
ಮುಂಬೈ: ದೇಶದ ಶ್ರೀಮಂತ ಗಣಪತಿ ಮಂಡಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಂಬೈನ ಜಿಎಸ್‌ಬಿ ಸೇವಾ ಮಂಡಲದ ಮಹಾ ಗಣೇಶನಿಗೆ ಈ ಬಾರಿ 474.46 ಕೋಟಿ ವಿಮೆ ಮಾಡಿಸಲಾಗಿದೆ.
ಮುಂಬೈನ ಕಿಂಗ್ ಸರ್ಕಲ್‌ನಲ್ಲಿ ಈ ಗಣೇಶ ಮಂಡಲವಿದ್ದು, ಜನಸಾಮಾನ್ಯರು ಸೇರಿದಂತೆ ಖ್ಯಾತನಾಮರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ವಿಮೆ ವ್ಯವಸ್ಥೆಯನ್ನು ನ್ಯೂ ಇಂಡಿಯಾ ಇನ್ಸೂರೆನ್ಸ್ ಕಂಪನಿ ಮಾಡಿದೆ. ಆದರೆ ಮಂಡಳಿಯು ವಿಮೆಯ ಪ್ರೀಮಿಯಂ ಮೊತ್ತವನ್ನು ಬಹಿರಂಗಪಡಿಸಿಲ್ಲ.
ಕಳೆದ ವರ್ಷ ಜಿಎಸ್‌ಬಿ ಮಂಡಲವು ₹ 400.58 ಕೋಟಿಗೆ ವಿಮೆ ಮಾಡಿಸಿತ್ತು. ಈ ಬಾರಿ ವಿಮಾ ಮೊತ್ತವು ₹ 73 ಕೋಟಿ ಹೆಚ್ಚಾಗಿದೆ ಎಂದು ಜಿಎಸ್‌ಬಿ ಸೇವಾ ಮಂಡಲದ ಟ್ರಸ್ಟಿ ಹಾಗೂ ವಕ್ತಾರ ಅಮಿತ್ ಡಿ. ಪೈ ಮಾಹಿತಿ ನೀಡಿದ್ದಾರೆ.
ಗಣೇಶನಿಗೆ ತೊಡಿಸುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ₹ 67.03 ಕೋಟಿ, ಉತ್ಸವದ ವೇಳೆ ಸಂಭವಿಸುವ ಅನಾಹುತಗಳಿಗೆ ಪರಿಹಾರವಾಗಿ ₹ 2 ಕೋಟಿ ವಿಮೆ ಮಾಡಿಸಲಾಗಿದೆ. ಇದರಲ್ಲಿ ಭೂಕಂಪ ಹಾಗೂ ಅಗ್ನಿ ಅವಘಡದಿಂದಾಗುವ ಹಾನಿಗೆ(ಕಚೇರಿ ಸಾಮಾನುಗಳು, ಕಂಪ್ಯೂಟರ್‌ಗಳು, ಸಿಸಿಟಿವಿ ಕ್ಯಾಮೆರಾಗಳು, ಕ್ಯೂಆರ್ ಸ್ಕ್ಯಾನರ್‌ಗಳು, ಪಾತ್ರೆಗಳು, ಅಕ್ಕಿ-ದಿನಸಿ, ಹಣ್ಣು-ತರಕಾರಿಗಳು ಇದರಲ್ಲಿ ಸೇರಿವೆ) ವಿಮೆ ಮಾಡಲಾಗಿದೆ.
ಸಾರ್ವಜನಿಕ ಹೊಣೆಗಾರಿಕೆಯಡಿ ಮೂರ್ತಿ ಪ್ರತಿಷ್ಠಾಪಿಸುವ ಪೆಂಡಾಲ್, ಕ್ರೀಡಾಂಗಣ ಹಾಗೂ ಭಕ್ತರಿಗಾಗಿ ₹ 30 ಕೋಟಿ ವಿಮೆ ಮಾಡಿಸಲಾಗಿದೆ.
ಉಳಿದಂತೆ ಸ್ವಯಂ ಸೇವಕರು, ಅರ್ಚಕರು, ಅಡುಗೆ ಸಿಬ್ಬಂದಿ, ಪಾದರಕ್ಷೆ ಕಾಯುವ ಸಿಬ್ಬಂದಿ, ರಕ್ಷಣಾ ಸಿಬ್ಬಂದಿಗಾಗಿ ₹ 375 ಕೋಟಿ ವಿಮೆ ಮಾಡಿಸಲಾಗಿದೆ. ಮೂರ್ತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಸಂಭವಿಸುವ ಅಗ್ನಿ ಅವಘಡಗಳಿಗೆ ₹ 43 ಕೋಟಿ ವಿಮೆ ಮಾಡಿಸಲಾಗಿದೆ.
ಮಹಾನಗರದಲ್ಲಿರುವ ಎಲ್ಲಾ ಗಣೇಶ ಮಂಡಳಿಗಳ ಪೈಕಿ ಜಿಎಸ್‌ಬಿ ಸೇವಾ ಮಂಡಳಿಯ ಗಣಪತಿಗೆ ಸಂಪ್ರದಾಯದಂತೆ 24 ಗಂಟೆಗಳೂ ಪೂಜೆ, ಅರ್ಚನೆ ಹಾಗೂ ಅನ್ನದಾನ ಸೇವೆ ನಡೆಯುತ್ತದೆ.
ಇಲ್ಲಿ ಪ್ರತಿಷ್ಠಾಪಿಸುವ ಗಣೇಶನಿಗೆ 69 ಕೆ.ಜಿ ಬಂಗಾರದ ಆಭರಣಗಳು, 336 ಕೆ.ಜಿ ಬೆಳ್ಳಿ ಹಾಗೂ ಇತರೆ ಅಮೂಲ್ಯ ವಸ್ತುಗಳಿಂದ ಅಲಂಕರಿಸಲಾಗುತ್ತದೆ. ಇವುಗಳನ್ನು ಭಕ್ತರು ಹಾಗೂ ಸೇವಾದಾರರು ದೇಣಿಗೆಯಾಗಿ ನೀಡಿರುತ್ತಾರೆ.
ಪ್ರತಿ ವರ್ಷ ಜಿಎಸ್‌ಬಿ ಸೇವಾ ಮಂಡಳಿಯು ದುರ್ಬಲ ವರ್ಗದವರಿಗೆ ಶಿಕ್ಷಣ ಪಡೆಯಲು ಹಾಗೂ ಸ್ವ–ಉದ್ಯೋಗಕ್ಕೆ ಆರ್ಥಿಕ ಸಹಾಯ ಮಾಡುತ್ತದೆ ಎಂದು ಅಮಿತ್ ಡಿ. ಪೈ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.