ADVERTISEMENT

ಇದು 'ಜಿಎಸ್‌ಟಿ 1.5';'ಜಿಎಸ್‌ಟಿ 2.0'ಗಾಗಿ ಕಾಯುವಿಕೆ ಮುಂದುವರಿದಿದೆ: ಕಾಂಗ್ರೆಸ್

ಪಿಟಿಐ
Published 4 ಸೆಪ್ಟೆಂಬರ್ 2025, 7:08 IST
Last Updated 4 ಸೆಪ್ಟೆಂಬರ್ 2025, 7:08 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸುವ ಮಹತ್ವದ ನಿರ್ಧಾರಕ್ಕೆ ಜಿಎಸ್‌ಟಿ ಮಂಡಳಿ ಒಪ್ಪಿಗೆ ನೀಡಿದೆ.

ಹೊಸ ತೆರಿಗೆ ವ್ಯವಸ್ಥೆಯನ್ನು ಕೇಂದ್ರ ಸರ್ಕಾರವು 'ಮುಂದಿನ ಪೀಳಿಗೆಯ ಜಿಎಸ್‌ಟಿ ಪರಿಷ್ಕರಣೆ' ಎಂದು ಹೆಸರಿಸಿತ್ತು. ಆದರೆ ಇದು 'ಜಿಎಸ್‌ಟಿ 1.5' ಆಗಿದ್ದು, ನಿಜವಾದ 'ಜಿಎಸ್‌ಟಿ 2.0'ಗಾಗಿ ಕಾಯುವಿಕೆ ಮುಂದುವರಿದಿದೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಸುಮಾರು ಒಂದು ದಶಕದಿಂದ ಜಿಎಸ್‌ಟಿ ಸರಳೀಕರಣಗೊಳಿಸಲು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ 'ಒಂದು ರಾಷ್ಟ್ರ, ಒಂದು ತೆರಿಗೆ' ವ್ಯವಸ್ಥೆಯನ್ನು 'ಒಂದು ರಾಷ್ಟ್ರ, ಒಂಬತ್ತು ತೆರಿಗೆ'ಗಳಾಗಿ ಬದಲಿಸಿತ್ತು. ಅದರಲ್ಲಿ ಶೇ 0, ಶೇ 5, ಶೇ 12, ಶೇ 18, ಶೇ 28, ಶೇ 0.25, ಶೇ 1.5, ಶೇ 3 ಮತ್ತು ಶೇ 6 ತೆರಿಗೆ ವ್ಯವಸ್ಥೆ ಇತ್ತು' ಎಂದು ಆರೋಪಿಸಿದ್ದಾರೆ.

ADVERTISEMENT

'2019 ಹಾಗೂ 2024ರ ಪ್ರಣಾಳಿಕೆಗಳಲ್ಲಿ ಕಾಂಗ್ರೆಸ್ ಪಕ್ಷವು ಜಿಎಸ್‌ಟಿ 2.0 ವ್ಯವಸ್ಥೆಯ ಸರಳೀಕರಣಗೊಳಿಸಲು ಒತ್ತಾಯಿಸಿತ್ತು. ಅದು ಎಂಎಸ್‌ಎಂಇ ಹಾಗೂ ಸಣ್ಣ ವಹಿವಾಟಿನ ಮೇಲೆ ಕೆಟ್ಟ ಪರಿಣಾಮ ಬೀರಿತ್ತು' ಎಂದು ಅವರು ತಿಳಿಸಿದ್ದಾರೆ.

'2008ರಲ್ಲಿ ಕಾಂಗ್ರೆಸ್-ಯುಪಿಎ ಸರ್ಕಾರವು ಲೋಕಸಭೆಯಲ್ಲಿ ಜಿಎಸ್‌ಟಿಯನ್ನು ಅಧಿಕೃತವಾಗಿ ಘೋಷಿಸಿತು. 2011ರಲ್ಲಿ ಅಂದಿನ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಜಿಎಸ್‌ಟಿ ಮಸೂದೆ ಮಂಡಿಸಿದಾಗ ಬಿಜೆಪಿ ಅದನ್ನು ವಿರೋಧಿಸಿತ್ತು' ಎಂದು ಖರ್ಗೆ ಉಲ್ಲೇಖಿಸಿದ್ದಾರೆ.

'ಇಂದು ಜಿಎಸ್‌ಟಿ ಸಂಗ್ರಹದಲ್ಲಿ ದಾಖಲೆ ಮಾಡಿದೆ ಅಂತ ಬಿಜೆಪಿ ಸರ್ಕಾರವು ಸಂಭ್ರಮಿಸುತ್ತಿದೆ. ಆದರೆ ಮೊದಲ ಬಾರಿಗೆ ರೈತರಿಗೆ ತೆರಿಗೆ ವಿಧಿಸಿದೆ. ಕೃಷಿ ಕ್ಷೇತ್ರದಲ್ಲಿ ಕನಿಷ್ಠ 36 ವಸ್ತುಗಳ ಮೇಲೆ ಜಿಎಸ್‌ಟಿ ಹೇರಲಾಗಿದೆ' ಎಂದು ಅವರು ಹೇಳಿದ್ದಾರೆ.

'ದಿನನಿತ್ಯದ ವಸ್ತುಗಳ ಮೇಲೂ ಜಿಎಸ್‌ಟಿ ಹೇರಲಾಯಿತು. ಅದಕ್ಕಾಗಿಯೇ ನಾವು ಬಿಜೆಪಿಯ ಜಿಎಸ್‌ಟಿಯನ್ನು 'ಗಬ್ಬರ್ ಸಿಂಗ್ ತೆರಿಗೆ' ಎಂದು ಹೆಸರಿಸಿದ್ದೆವು ಎಂದು ಹೇಳಿದ್ದಾರೆ.

'ಕಳೆದ ಐದು ವರ್ಷಗಳಲ್ಲಿ ಆದಾಯ ತೆರಿಗೆ ಸಂಗ್ರಹವು ಶೇ 240 ಹಾಗೂ ಜಿಎಸ್‌ಟಿ ಸಂಗ್ರಹವು ಶೇ 177ರಷ್ಟು ಹೆಚ್ಚಾಗಿದೆ. ಎಂಟು ವರ್ಷಗಳ ಬಳಿಕವಾದರೂ ಗಾಢ ನಿದ್ದೆಯಿಂದ ಎದ್ದು ಜಿಎಸ್‌ಟಿ ಬಗ್ಗೆ ಮಾತನಾಡಿರುವುದು ಒಳ್ಳೆಯ ವಿಚಾರ' ಎಂದು ಹೇಳಿದ್ದಾರೆ.

'ಜಿಎಸ್‌ಟಿಯ ಸಂಕೀರ್ಣತೆ ಬಗೆಹರಿಯಬೇಕು. ಆಗ ಮಾತ್ರ ಎಂಎಸ್‌ಎಂಇ ಹಾಗೂ ಸಣ್ಣ ಕೈಗಾರಿಕೆಗಳಿಗೆ ನಿಜವಾದ ಪ್ರಯೋಜನ ಸಿಗುತ್ತದೆ' ಎಂದು ಅವರು ಪ್ರತಿಪಾದಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಸಹ ಪ್ರತಿಕ್ರಿಯಿಸಿದ್ದು, 'ಹೊಸ ವ್ಯವಸ್ಥೆ 'ಜಿಎಸ್‌ಟಿ 1.5' ಆಗಿದ್ದು, ನಿಜವಾದ 'ಜಿಎಸ್‌ಟಿ 2.0'ಗಾಗಿ ಕಾಯುವಿಕೆ ಮುಂದುವರಿದಿದೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.