ADVERTISEMENT

ಜಿಎಸ್‌ಟಿ ಸರಳೀಕರಣ: ಆರ್ಥಿಕತೆಗೆ ಡಬಲ್‌ ಡೋಸ್‌ ಆಗಿದೆ ಎಂದ ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಸರಕು ಸೇವಾ ತೆರಿಗೆಯ (ಜಿಎಸ್‌ಟಿ) ಸರಳೀಕರಣವು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಆರ್ಥಿಕ ಸುಧಾರಣೆಗಳ ಡಬಲ್‌ ಡೋಸ್‌ ಆಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವ ಅಭಿಯಾನವನ್ನು ಮುನ್ನಡೆಸುವಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಎಲ್ಲ ವರ್ಗದವರು, ಬಡವರು, ಮಧ್ಯಮ ವರ್ಗದವರು, ಮಹಿಳೆಯರು, ವಿದ್ಯಾರ್ಥಿಗಳು, ರೈತರು ಹಾಗೂ ಯುವ ಪೀಳಿಗೆಯು ತೆರಿಗೆ ಕಡಿತದ ಪ್ರಯೋಜನವನ್ನು ಪಡೆಯಲಿದ್ದಾರೆ’ ಎಂದು ಹೇಳಿದರು.

ADVERTISEMENT

‘21ನೇ ಶತಮಾನದಲ್ಲಿ ಭಾರತದ ಪ್ರಗತಿಯನ್ನು ಬೆಂಬಲಿಸಲು ಮುಂದಿನ ತಲೆಮಾರಿನ ಜಿಎಸ್‌ಟಿ ಸುಧಾರಣೆಯು ಸಹಕಾರಿಯಾಗಿದೆ. ಜಿಎಸ್‌ಟಿ 2.0ನಿಂದ ದೇಶದ ಬೆಳವಣಿಗೆ ದ್ವಿಗುಣವಾಗಿದೆ. ಜಿಎಸ್‌ಟಿ ಸುಧಾರಣೆಗಳ ಮೂಲಕ ಭಾರತದ ರೋಮಾಂಚಕ ಆರ್ಥಿಕತೆಗೆ ಹೊಸ ಐದು ರತ್ನಗಳನ್ನು (ಪಂಚರತ್ನ) ಸೇರಿಸಲಾಗಿದೆ’ ಎಂದು ತಿಳಿಸಿದರು.

‘2014ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ದಿನ ಬಳಕೆ ವಸ್ತುಗಳ ಮೇಲೆ ಅಧಿಕ ತೆರಿಗೆ ವಿಧಿಸಲಾಗಿತ್ತು. ಅಡುಗೆ ಪಾತ್ರೆಗಳು, ಕೃಷಿ ಉಪಕರಣಗಳು, ಔಷಧ, ಜೀವವಿಮೆ ಹೀಗೆ ವಿವಿಧ ವಸ್ತುಗಳ ಮೇಲೆ ಕಾಂಗ್ರೆಸ್‌ ಸರ್ಕಾರವು ವಿವಿಧ ತೆರಿಗೆಗಳನ್ನು ವಿಧಿಸಿತ್ತು’ ಎಂದು ಮೋದಿ ಟೀಕಿಸಿದರು.

ರಾಜತಾಂತ್ರಿಕತೆ ಮೀರಿದ ಸಂಬಂಧ

‘ಭಾರತ ಹಾಗೂ ಸಿಂಗಪುರ ನಡುವಿನ ಸಂಬಂಧ ರಾಜತಾಂತ್ರಿಕತೆ ಮೀರಿದ್ದಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ದ್ವಿಪಕ್ಷೀಯ ಸಂಬಂಧ ವಿಸ್ತರಣೆ ಸಂಬಂಧ ನವದೆಹಲಿಗೆ ಬಂದಿಳಿದ ಸಿಂಗಪುರ ಪ್ರಧಾನಿ ಲಾರೆನ್ಸ್‌ ವಾಂಗ್‌ ಮುಂದೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.