ADVERTISEMENT

ಗುಜರಾತ್: ರಾಸಾಯನಿಕ ಟ್ಯಾಂಕರ್‌ನಿಂದ ವಿಷಾನಿಲ ಸೋರಿಕೆ; 6 ಕಾರ್ಮಿಕರು ಸಾವು

ಪಿಟಿಐ
Published 6 ಜನವರಿ 2022, 9:27 IST
Last Updated 6 ಜನವರಿ 2022, 9:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೂರತ್: ಗುಜರಾತ್‌ನ ಸೂರತ್‌ನಲ್ಲಿ ಕಾರ್ಖಾನೆಯೊಂದರ ಬಳಿ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕರ್‌ನಿಂದ ವಿಷಾನಿಲ ಸೋರಿಕೆಯಾಗಿ ಆರು ಮಂದಿ ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದು, 22 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಸಚಿನ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಖಾನೆಯ ಹೊರಗಡೆ ನಿಲ್ಲಿಸಿದ್ದ ರಾಸಾಯನಿಕ ಟ್ಯಾಂಕರ್‌ನಿಂದ ಗುರುವಾರ ಮುಂಜಾನೆ ಅನಿಲ ಸೋರಿಕೆಯಾಗಿದೆ. ಘಟನೆ ನಡೆದಾಗ ಕಾರ್ಮಿಕರು ಫ್ಯಾಕ್ಟರಿಯಲ್ಲಿ ಇದ್ದರು ಎಂದು ಸೂರತ್ ಮುನ್ಸಿಪಲ್ ಕಾರ್ಪೊರೇಷನ್‌ನ (ಎಸ್‌ಎಂಸಿ) ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸಂತ್ ಪರೀಕ್ ಹೇಳಿದ್ದಾರೆ.

ಮುಂಜಾನೆ 4.25ರ ಹೊತ್ತಿಗೆ ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಬಂದಿತ್ತು. ಕಾರ್ಖಾನೆಯ ಹೊರಗಡೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ಯಾಂಕರ್‌ನಿಂದ ಹೊರಬಂದ ವಿಷಕಾರಿಅನಿಲ ಸೇವಿಸಿದ 25ರಿಂದ 26 ಕಾರ್ಮಿಕರು ಪ್ರಜ್ಞಾಹೀನರಾದರು. ಬಳಿಕ ಅವರನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು ಎಂದವರು ಮಾಹಿತಿ ನೀಡಿದರು.

ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದು, 22 ಮಂದಿ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯಾಧಿಕಾರಿ ಓಂಕಾರ್ ಚೌಧರಿ ತಿಳಿಸಿದ್ದಾರೆ.

ಟ್ಯಾಂಕರ್ ಸೋರಿಕೆಯನ್ನು ತಡೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ವಿಷಾನಿಲ ಸೋರಿಕೆಯಾದ ಪರಿಣಾಮ ಸಮೀಪದ ಪ್ರದೇಶಗಳಿಗೂ ಹರಡಿತ್ತು. ಎರಡು ಬೀದಿ ನಾಯಿಗಳು ಸತ್ತಿವೆ.

ಮುಂಜಾಗ್ರತಾ ಕ್ರಮವಾಗಿ ಸಮೀಪದ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂತಾಪ ಸೂಚಿಸಿದ್ದು, ಅನಾರೋಗ್ಯಕ್ಕೆ ಒಳಗಾದವರು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.