ADVERTISEMENT

ತೀಸ್ತಾ ಸೆಟಲ್‌ವಾಡ್‌, ಆರ್‌.ಬಿ. ಶ್ರೀಕುಮಾರ್‌ಗೆ ಜಾಮೀನು ನಿರಾಕರಿಸಿದ ಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜುಲೈ 2022, 12:42 IST
Last Updated 30 ಜುಲೈ 2022, 12:42 IST
ತೀಸ್ತಾ ಸೆಟಲ್‌ವಾಡ್‌: ಚಿತ್ರ– ಎಂ.ಎಸ್. ಮಂಜುನಾಥ್
ತೀಸ್ತಾ ಸೆಟಲ್‌ವಾಡ್‌: ಚಿತ್ರ– ಎಂ.ಎಸ್. ಮಂಜುನಾಥ್   

ಅಹಮದಾಬಾದ್: 2002ರ ಗುಜರಾತ್ ಕೋಮುಗಲಭೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಕಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿರುವ ಆರೋಪದಲ್ಲಿ ಬಂಧಿತವಾಗಿರುವ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಮತ್ತು ಮಾಜಿ ಡಿಜಿಪಿ ಆರ್‌.ಬಿ. ಶ್ರೀಕುಮಾರ್ ಅವರಿಗೆ ಗುಜರಾತಿನ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

‘ಸೆಟಲ್‌ವಾಡ್‌ ಹಾಗೂ ಶ್ರೀಕುಮಾರ್‌ ಮೇಲೆ ಗಂಭೀರ ಆರೋಪಗಳಿವೆ. ಹೀಗಾಗಿ ಅವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ’ ಎಂದು ಹೆಚ್ಚುವರಿ ಪ್ರಧಾನ ನ್ಯಾಯಾಧೀಶ ಡಿ.ಡಿ.ಠಕ್ಕರ್‌ ಶನಿವಾರ ಹೇಳಿದ್ದಾರೆ.

ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಜುಲೈ 26ರಂದು ಪ್ರಕಟಿಸುವುದಾಗಿ ಠಕ್ಕರ್‌ ಈ ಹಿಂದೆ ಹೇಳಿದ್ದರು. ಆದರೆ, ಆದೇಶ ಸಿದ್ಧವಾಗದ ಕಾರಣ ಮುಂದೂಡಲಾಗಿತ್ತು.

ADVERTISEMENT

ಇದಕ್ಕೂ ಮುನ್ನ, ಜುಲೈ 2ರಂದು ಸೆಟಲ್‌ವಾಡ್ ಮತ್ತು ಶ್ರೀಕುಮಾರ್ ಅವರನ್ನು ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿತ್ತು. ಪೊಲೀಸರು ಅವರನ್ನು ಹೆಚ್ಚಿನ ಕಸ್ಟಡಿಗೆ ನೀಡುವಂತೆ ಕೋರಿರಲಿಲ್ಲ.

2002ರ ಗುಜರಾತ್‌ ಗಲಭೆ ಪ‍್ರಕರಣ ಗಳಲ್ಲಿ ಮುಗ್ಧ ಜನರನ್ನು ಸಿಲುಕಿಸುವುದಕ್ಕಾಗಿ ದಾಖಲೆಗಳನ್ನು ತಿರುಚಿದ ಮತ್ತು ಅಪರಾಧ ಒಳಸಂಚು ನಡೆಸಿದ ಆರೋಪದಲ್ಲಿ ತೀಸ್ತಾ, ಮಾಜಿ ಐಪಿಎಸ್‌ ಅಧಿಕಾರಿಗಳಾದ ಆರ್‌.ಬಿ. ಶ್ರೀಕುಮಾರ್ ಮತ್ತು ಸಂಜೀವ್‌ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. 2002ರ ಗೋಧ್ರೋತ್ತರ ಗಲಭೆ ಪ್ರಕರಣದಲ್ಲಿ, ಆಗ ಗುಜರಾತ್ ಮುಖ್ಯ ಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ಇತರರನ್ನು ವಿಶೇಷ ತನಿಖಾ ತಂಡವು (ಎಸ್‌ಐಟಿ) ಆರೋಪಮುಕ್ತ ಗೊಳಿಸಿದ್ದನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದ ಮರುದಿನ ತೀಸ್ತಾ ಅವರ ಬಂಧನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.