ADVERTISEMENT

ಮೊರ್ಬಿ ದುರಂತ: ವಾರದೊಳಗೆ ವರದಿ ನೀಡುವಂತೆ ಸರ್ಕಾರಕ್ಕೆ ಗುಜರಾತ್ ಹೈಕೋರ್ಟ್ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2022, 11:02 IST
Last Updated 7 ನವೆಂಬರ್ 2022, 11:02 IST
ಮುರಿದು ಬಿದ್ದ ತೂಗು ಸೇತುವೆ (ಪಿಟಿಐ ಚಿತ್ರ)
ಮುರಿದು ಬಿದ್ದ ತೂಗು ಸೇತುವೆ (ಪಿಟಿಐ ಚಿತ್ರ)   

ಅಹಮದಾಬಾದ್‌ (ಗುಜರಾತ್‌): ಮೊರ್ಬಿ ಪಟ್ಟಣದಲ್ಲಿ ಸಂಭವಿಸಿದ ತೂಗು ಸೇತುವೆ ದುರಂತದ ವಿಚಾರವಾಗಿ ಒಂದು ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಮತ್ತು ವರದಿ ಸಲ್ಲಿಸುವಂತೆ ರಾಜ್ಯಸರ್ಕಾರಕ್ಕೆ ಗುಜರಾತ್‌ ಹೈಕೋರ್ಟ್‌ ನೋಟಿಸ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್‌ ಮತ್ತು ನ್ಯಾಯಮೂರ್ತಿ ಅಷುತೋಶ್ ಶಾಸ್ತ್ರಿ ಅವರಿದ್ದ ವಿಭಾಗೀಯ ಪೀಠ, ರಾಜ್ಯ ಮುಖ್ಯ ಕಾರ್ಯದರ್ಶಿ ಅವರಿಂದಲೂ ವರದಿ ಕೇಳಿದೆ.

'ನಾವುಈ ರೀತಿಯಲ್ಲಿ (ದುರಂತದೊಂದಿಗೆ) ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿರುವುದು ನೋವುಂಟು ಮಾಡುತ್ತಿದೆ. ಈ ಸಂಬಂಧ ವರ್ಷಾಂತ್ಯದೊಳಗೆ ಕ್ರಮ ಕೈಗೊಳ್ಳಬೇಕೆಂದು ಬಯಸುತ್ತೇವೆ. ನೀವು ಏನು ಕ್ರಮ ಕೈಗೊಂಡಿದ್ದೀರಿ ಅಥವಾ ಕೈಗೊಂಡಿಲ್ಲ ಎಂಬುದು ನಮಗೆ ತಿಳಿದಿಲ್ಲ' ಎಂದು ನ್ಯಾಯಮೂರ್ತಿಅರವಿಂದ್ ಕುಮಾರ್‌ ಅವರು ನೋಟಿಸ್‌ ಜಾರಿ ವೇಳೆ ಹೇಳಿದ್ದಾರೆ. ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಸರ್ಕಾರದ ಪರ ವಕೀಲ ಕುಮಾರ್‌ ತ್ರಿವೇದಿ, ನೋಟಿಸ್ ಸ್ವೀಕರಿಸಿದ್ದು, 'ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.

ADVERTISEMENT

ಪ್ರಕರಣಕ್ಕೆ ಸಂಬಧಿಸಿದ ಬೆಳವಣಿಗೆಗಳ ಕುರಿತ ವರದಿಯನ್ನು ಮುಂದಿನ ಸೋಮವಾರದೊಳಗೆ (ನವೆಂಬರ್‌ 14) ಸಲ್ಲಿಸಬೇಕು ಎಂದು ರಾಜ್ಯ ಮುಖ್ಯಕಾರ್ಯದರ್ಶಿ ಮತ್ತು ಗೃಹ ಇಲಾಖೆಗೂ ಪೀಠ ಸೂಚಿಸಿದೆ.

ಅಕ್ಟೋಬರ್‌ 31ರಂದು ಮಾಧ್ಯಗಳಲ್ಲಿ ವರದಿಯಾದ ಸುದ್ದಿ ಆಧರಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳಿರುವ ಪೀಠ, ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ನೋಂದಾಯಿಸುವಂತೆ ರಿಜಿಸ್ಟ್ರಾರ್‌ಗೆ ನಿರ್ದೇಶನ ನೀಡಿದೆ. ಪಿಐಎಲ್‌ನ ವಿಚಾರಣೆ ನವೆಂಬರ್‌ 14ರಂದು ನಡೆಯಲಿದೆ.

ಪಶ್ಚಿಮ ಗುಜರಾತ್‌ನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಶತಮಾನದಷ್ಟು ಹಳೆಯ ತೂಗುಸೇತುವೆಅಕ್ಟೋಬರ್‌ 30ರಂದು ಮುರಿದು ಬಿದ್ದಿತ್ತು. ಈ ದುರಂತದಲ್ಲಿ135 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.