ಕಿರಣ್ ರಿಜಿಜು
ನವದೆಹಲಿ: ‘ಕೇಂದ್ರ ಸರ್ಕಾರ ಆಯೋಜಿಸುವ ಹಜ್ ಯಾತ್ರೆಗಳಲ್ಲಿ 2025 ಅತ್ಯಂತ ಯಶಸ್ವಿಯಾಗಿ ನಡೆದಿದೆ. 2024ರಲ್ಲಿ 200 ಜನ ಮೃತಪಟ್ಟಿದ್ದರು. ಈವರ್ಷ 64 ಜನ ಮೃತಪಟ್ಟಿದ್ದು, ಅದು ಈವರೆಗಿನ ಅತ್ಯಂತ ಕನಿಷ್ಠ ಸಾವಿನ ಸಂಖ್ಯೆಯಾಗಿದೆ’ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಹಜ್ ಯಾತ್ರೆ ಪರಿಶೀಲನಾ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘2026ರ ಹಜ್ ಯಾತ್ರೆಗೆ ಮುಂದಿನ ಒಂದು ತಿಂಗಳಲ್ಲಿ ಅರ್ಜಿ ಆಹ್ವಾನಿಸಲಾಗುವುದು’ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಮಂತ್ರದಂತೆ ಜೀವನದಲ್ಲಿ ಒಂದು ಬಾರಿಯದರೂ ಹಜ್ ಯಾತ್ರೆ ಕೈಗೊಳ್ಳುವ ಸಂಕಲ್ಪ ಮಾಡುವ ಮುಸಲ್ಮಾನರಿಗೆ ಸರ್ಕಾರದ ಯೋಜನೆ ನೆರವಾಗಿದೆ. ಕಾಲಮಿತಿಯೊಳಗೆ ಆಸಕ್ತರು ಅರ್ಜಿ ಸಲ್ಲಿಸಬೇಕು. ಅರ್ಜಿಗಳ ಪರಿಶೀಲನೆ ನಂತರ ಸೌದಿ ಅರೇಬಿಯಾ ಸರ್ಕಾರಕ್ಕೆ ಅವುಗಳನ್ನು ಕಳುಹಿಸಬೇಕು’ ಎಂದರು.
‘ಭಾರತದಿಂದ ಯಾತ್ರೆ ಕೈಗೊಳ್ಳಲಿರುವವರ ಪರವಾಗಿ ಭಾರತ ಸರ್ಕಾರವು ಸೌದಿಯಲ್ಲಿ ಭದ್ರತಾ ಠೇವಣಿ ಇಡಬೇಕು. ಅರ್ಜಿದಾರರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿದಲ್ಲಿ, ಈ ಎಲ್ಲಾ ಕಾರ್ಯಗಳೂ ಸುಲಲಿತವಾಗಲಿವೆ’ ಎಂದು ರಿಜಿಜು ಹೇಳಿದ್ದಾರೆ.
ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಖಾತೆ ಸಚಿವ ಜಾರ್ಜ್ ಕುರಿಯನ್, ಕಾರ್ಯದರ್ಶಿಗಳಾದ ಚಂದ್ರಶೇಖರ್ ಕುಮಾರ್, ಕೆ. ಅರುಣ್, ಅಸೀಮ್ ಆರ್. ಮಹಜನ್, ಸೌದಿಯಲ್ಲಿರುವ ಭಾರತೀಯ ರಾಯಭಾರಿ ಸುಹೇಲ್ ಎಜಾಜ್ ಖಾನ್, ಜೆಡ್ಡಾದ ಕಾನ್ಸುಲೇಟ್ ಜನರಲ್ ಫಹಾದ್ ಅಹ್ಮದ್ ಖಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.