ADVERTISEMENT

ಹನುಮಾನ್‌ ಚಾಲೀಸಾ ಪಠಣ ವಿವಾದ: ರಾಣಾ ದಂಪತಿಗೆ ಮುಂಬೈ ಕೋರ್ಟ್‌ ಜಾಮೀನು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮೇ 2022, 7:59 IST
Last Updated 4 ಮೇ 2022, 7:59 IST
ಸಂಸದೆ ನವನೀತ್‌ ರಾಣಾ ಮತ್ತು ಅವರ ಪತಿ, ಶಾಸಕ ರವಿ ರಾಣಾ
ಸಂಸದೆ ನವನೀತ್‌ ರಾಣಾ ಮತ್ತು ಅವರ ಪತಿ, ಶಾಸಕ ರವಿ ರಾಣಾ   

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ 'ಮಾತೊಶ್ರೀ' ನಿವಾಸದ ಎದುರು ಹನುಮಾನ್‌ ಚಾಲೀಸಾ ಪಠಣ ಮಾಡುವುದಾಗಿ ಹೇಳಿಕೆ ನೀಡಿ ಬಂಧನಕ್ಕೆ ಒಳಗಾಗಿದ್ದ ಸಂಸದೆ ನವನೀತ್‌ ರಾಣಾ ಮತ್ತು ಅವರ ಪತಿ, ಶಾಸಕ ರವಿ ರಾಣಾ ಅವರಿಗೆ ಇಂದು ಜಾಮೀನು ದೊರೆತಿದೆ.

ಏಪ್ರಿಲ್‌ 23ರಂದು ಮುಂಬೈ ಪೊಲೀಸರು ದಂಪತಿಯನ್ನು ಬಂಧಿಸಿದ್ದರು. ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಬಂಧನವನ್ನು ಪ್ರಶ್ನಿಸಿ ದಂಪತಿ ಮುಂಬೈ ಸೆಷನ್ಸ್‌ ಕೋರ್ಟ್‌ಗೆ ಮನವಿ ಸಲ್ಲಿಸಿದ್ದ ಅವರಿಗೆ ಇಂದು ಜಾಮೀನು ಮಂಜೂರಾಗಿದೆ.

ರಾಣಾ ದಂಪತಿ ಹನುಮಾನ್‌ ಚಾಲೀಸಾ ಪಠಿಸುವ ಯೋಜನೆಯನ್ನು ಕೈಬಿಟ್ಟರೂ ದೇಶ ದ್ರೋಹ ಕಾಯ್ದೆಯಡಿ ಹಾಗೂ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನವನೀತ್ ರಾಣಾ ಬಾಯಖಲಾ ಮಹಿಳಾ ಜೈಲಿನಲ್ಲಿ ಮತ್ತು ರವಿ ರಾಣಾ ಅವರು ತಲೋಜಾ ಜೈಲಿನಲ್ಲಿದ್ದಾರೆ.

ADVERTISEMENT

ನಟಿ, ರಾಜಕಾರಣಿ ನವನೀತ್‌ ರಾಣಾ ಅವರು ಠಾಣೆಯಲ್ಲಿ ತಮಗೆ ಜಾತಿ ನಿಂದನೆ ಮಾಡಲಾಗಿದೆ. ಅಧಿಕಾರಿಗಳು ನೀರು ಕುಡಿಯಲು ಹಾಗೂ ಶೌಚಾಲಯ ಬಳಸಲು ಬಿಡುತ್ತಿಲ್ಲ ಎಂದು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಮುಂಬೈ ಪೊಲೀಸರು ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದರು. ಆ ವಿಡಿಯೊದಲ್ಲಿ ರಾಣಾ ದಂಪತಿ ಚಹಾ ಸೇವಿಸುತ್ತಿರುವುದು ದಾಖಲಾಗಿತ್ತು.

ಮಹಾರಾಷ್ಟ್ರದಲ್ಲಿ ಮಸೀದಿಗಳ ಮೇಲಿರುವ ಧ್ವನಿವರ್ಧಕಗಳನ್ನು ತೆಗೆಯುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್‌ ಠಾಕ್ರೆ ಆಗ್ರಹಿಸಿದ್ದಾರೆ. ಅದು ಸಾಧ್ಯವಾಗದೇ ಹೋದರೆ ಮಸೀದಿಗಳ ಎದುರು ಹನುಮಾನ್‌ ಚಾಲೀಸಾ ಪಠಣ ಆರಂಭಿಸುವುದಾಗಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.