ADVERTISEMENT

ಏರುಗತಿಯಲ್ಲಿ ದ್ವೇಷಾಪರಾಧ, ಗುಂಪುಹಲ್ಲೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 19:45 IST
Last Updated 8 ಅಕ್ಟೋಬರ್ 2019, 19:45 IST
   

ಬೆಂಗಳೂರು: ‘ದೇಶದಲ್ಲಿ ದ್ವೇಷಾಪರಾಧ ಮತ್ತು ಗುಂಪುಹಲ್ಲೆ–ಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2019ರ ಜನವರಿಯಿಂದ ಜೂನ್‌ವರೆಗೆ ಇಂತಹ 181 ಕೃತ್ಯಗಳು ದೇಶದಲ್ಲಿ ನಡೆದಿವೆ’ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಹೇಳಿದೆ.

ಅಮ್ನೆಸ್ಟಿಯು ಬಿಡುಗಡೆ ಮಾಡಿರುವ ‘ಹಾಲ್ಟ್‌ ದಿ ಹೇಟ್‌–2019’ ವರದಿಯಲ್ಲಿ ಈ ಮಾಹಿತಿ ಇದೆ. ಪೊಲೀಸರಲ್ಲಿ ದಾಖಲಾದ ದೂರುಗಳು ಮತ್ತು ಪತ್ರಿಕೆಗಳಲ್ಲಿ ವರದಿಯಾದ ಇಂತಹ ಕೃತ್ಯಗಳನ್ನು ಪರಿಶೀಲಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ಈ ಅವಧಿಯಲ್ಲಿ 72 ಗುಂಪುಹಲ್ಲೆಗಳು ನಡೆದಿವೆ. ಇದರಲ್ಲಿ ಮುಸ್ಲಿಮರ ವಿರುದ್ಧ 37 ಕೃತ್ಯಗಳು ನಡೆದಿರುವುದು ವರದಿಯಾಗಿದೆ. ಈ ಪ್ರಕರಣಗಳಲ್ಲಿ ಐವರು ಮುಸ್ಲಿಮರು ಮೃತಪಟ್ಟಿದ್ದಾರೆಎಂದು ಅಮ್ನೆಸ್ಟಿ ಹೇಳಿದೆ.

ADVERTISEMENT

2015ರ ದ್ವಿತಿಯಾರ್ಧದಲ್ಲಿ 51 ದ್ವೇಷಾಪರಾಧಗಳು ನಡೆದಿದ್ದವು. 2016ರಲ್ಲಿ 240, 2017ರಲ್ಲಿ 212 ಮತ್ತು 2018ರಲ್ಲಿ 218 ಕೃತ್ಯಗಳು ನಡೆದಿದ್ದವು. ಆದರೆ 2019ರ ಮೊದಲಾರ್ಧದಲ್ಲೇ 181 ಕೃತ್ಯಗಳು ನಡೆದಿವೆ. ಇದು ಅಂತ್ಯತ ಅಪಾಯಕಾರಿ ಬೆಳವಣಿಗೆ ಎಂದು ಅಮ್ನೆಸ್ಟಿ ಕಳವಳ ವ್ಯಕ್ತಪಡಿಸಿದೆ.

181 ದ್ವೇಷಾಪರಾಧಗಳಲ್ಲಿ 44 ಕೃತ್ಯಗಳು ಧರ್ಮದ ಕಾರಣಕ್ಕೆ ನಡೆದಿವೆ. ಇದರಲ್ಲಿ 40 ಕೃತ್ಯಗಳು ಮುಸ್ಲಿಮರ ವಿರುದ್ಧ ನಡೆದಿದ್ದರೆ, 4 ಕೃತ್ಯಗಳನ್ನು ಕ್ರೈಸ್ತ ಧರ್ಮೀಯರನ್ನು ಗುರಿ ಮಾಡಿ ಎಸಗಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇಂತಹ ಬಹುತೇಕ ಕೃತ್ಯಗಳಲ್ಲಿ ‘ಜೈ ಶ್ರೀರಾಂ’, ‘ಜೈ ಹನುಮಾನ್’, ಮತ್ತು ‘ಪಾಕಿಸ್ತಾನಕ್ಕೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಕೂಗುವಂತೆ ಸಂತ್ರಸ್ತರನ್ನು ಒತ್ತಾಯಿಸಲಾಗಿದೆ. ಇವುಗಳಿಗೆ ಸಂಬಂಧಿಸಿದ ವಿಡಿಯೊಗಳೂ ವೈರಲ್ ಆಗಿವೆ ಎಂದು ವರದಿ ಹೇಳಿದೆ.

ಮುಸ್ಲಿಮರ ವಿರುದ್ಧ 2015ರ ದ್ವಿತೀಯಾರ್ಧದಲ್ಲಿ 13, 2016ರಲ್ಲಿ 40, 2017ರಲ್ಲಿ 53 ಮತ್ತು 2018ರಲ್ಲಿ 50 ದ್ವೇಷಾಪರಾಧ ಕೃತ್ಯಗಳು ನಡೆದಿದ್ದವು

2018ರಲ್ಲಿ ಮುಸ್ಲಿಮರ ಮೇಲೆ ನಡೆದಿದ್ದ ದ್ವೇಷಾಪರಾಧಗಳಿಗೆ ಹೋಲಿಸಿದರೆ 2019ರ ಮೊದಲಾರ್ಧದಲ್ಲೇ ಶೇ 45ರಷ್ಟು ಹೆಚ್ಚು ದ್ವೇಷಾ ಪರಾಧಗಳಿಗೆ ಮುಸ್ಲಿಮರು ಗುರಿಯಾಗಿದ್ದಾರೆ. ಕಾಶ್ಮೀರದ ಪುಲ್ವಾಮಾದಲ್ಲಿ ಭದ್ರತಾ ಸಿಬ್ಬಂದಿ ಮೇಲೆ ಉಗ್ರರ ಆತ್ಮಹತ್ಯಾ ದಾಳಿ ನಡೆದ ನಂತರ ಮುಸ್ಲಿಮರ ಮೇಲೆ ಗುಂಪುಹಲ್ಲೆಗಳು ಹೆಚ್ಚು ನಡೆದಿವೆ ಎಂದು ಅಮ್ನೆಸ್ಟಿ ಹೇಳಿದೆ.

ಈ ಅವಧಿಯಲ್ಲಿ ಮುಸ್ಲಿಮರನ್ನು ಗುರಿ ಮಾಡಿ ಕೊಂಡು 40 ದ್ವೇಷಾಪರಾಧಗಳು ನಡೆದಿವೆ. ಇದರಲ್ಲಿ 37 ದ್ವೇಷಾಪರಾಧಗಳು ಗುಂಪುಹಲ್ಲೆಗಳಾಗಿವೆ.

2019ರ ಜೂನ್‌ 17ರಂದು ಜಾರ್ಖಂಡ್‌ನಲ್ಲಿ 24 ವರ್ಷದ ತಬ್ರೇಜ್ ಅನ್ಸಾರಿ ಎಂಬ ಯುವಕನನ್ನು ಬೈಕ್ ಕದ್ದ ಆರೋಪದಲ್ಲಿ ಹೊಡೆದು ಕೊಲ್ಲಲಾಗಿತ್ತು. ‘ಜೈ ಶ್ರೀರಾಂ’ ಎಂದು ಜಪಿಸುವಂತೆ ಈ ಯುವಕನನ್ನು ಬಲವಂತ ಮಾಡಿ, ಬಳಿಕ ಹಲ್ಲೆ ನಡೆಸಿದ ವಿಡಿಯೊ ವೈರಲ್ ಆಗಿತ್ತು. ಈ ಕೃತ್ಯ ದೇಶದಾದ್ಯಂತ ಸುದ್ದಿ ಮಾಡಿತ್ತು.

***

ಈ ಕೃತ್ಯಗಳನ್ನು ಪ್ರತ್ಯೇಕವಾಗಿ ‘ದ್ವೇಷಾಪರಾಧ’ ಎಂದು ಗುರುತಿಸಲು ಭಾರತೀಯ ದಂಡ ಸಂಹಿತೆಯಲ್ಲಿ ಅವಕಾಶವಿಲ್ಲದ ಕಾರಣ, ಇವು ಕಡಿಮೆಯಾಗುತ್ತಿಲ್ಲ

- ಅಮ್ನೆಸ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.