ಹೈದರಾಬಾದ್: ಹಣ ದುರುಪಯೋಗ ಆರೋಪದ ಮೇಲೆ ತೆಲಂಗಾಣ ಸಿಐಡಿ ಅಧಿಕಾರಿಗಳು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್‌ನ (ಎಚ್‌ಸಿಎ) ಅಧ್ಯಕ್ಷ ಎ. ಜಗನ್ ಮೋಹನ್ ರಾವ್ ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ.
ಜಗನ್ ಜೊತೆಗೆ ಸಂಸ್ಥೆಯ ಖಜಾಂಚಿ ಸಿ. ಶ್ರೀನಿವಾಸ್ ರಾವ್, ಸಿಇಒ ಸುನೀಲ್ ಕಾಂತೆ ಹಾಗೂ ಮತ್ತಿಬ್ಬರನ್ನು ಬಂಧಿಸಲಾಗಿದೆ. ಈ ಎಲ್ಲರನ್ನೂ ಹಣ ದುರುಪಯೋಗ, ತಪ್ಪುಲೆಕ್ಕ ನಿರ್ವಹಣೆ ಹಾಗೂ ಇತರೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2025 ಐಪಿಎಲ್ ಅವಧಿಯಲ್ಲಿ ನಡೆದಿದ್ದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಎಚ್‌ಸಿಎ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಬುಧವಾರ ಸಿಐಡಿ ವಶಕ್ಕೆ ಪಡೆದುಕೊಂಡಿದೆ.
ಹೆಚ್ಚಿನ ಉಚಿತ ಟಿಕೆಟ್‌ಗಳನ್ನು ನೀಡುವಂತೆ ಎಚ್‌ಸಿಎ ಆಡಳಿತ ಮಂಡಳಿಯವರು ಬ್ಲ್ಯಾಕ್‌ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಹೈದರಾಬಾದ್‌ನ ಸನ್‌ರೈಸರ್ಸ್ ತಂಡವು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ದೂರು ನೀಡಿ ಮಧ್ಯಪ್ರವೇಶಿಸುವಂತೆ ಕೋರಿತ್ತು. ಇದರ ಬೆನ್ನಲ್ಲೇ, ರೇವಂತ್ ಅವರು ತನಿಖೆಗೆ ಆದೇಶಿಸಿದ್ದರು.
ಈ ಎಲ್ಲಾ ಆರೋಪಗಳನ್ನು ಎಚ್‌ಸಿಎ ನಿರಾಕರಿಸಿದೆ.
‘ಫ್ರಾಂಚೈಸಿ ಮುಂದೆ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲ’ ಎಂದು ಜಗನ್‌ಮೋಹನ್ ರಾವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.