ADVERTISEMENT

ಅಸ್ಸಾಂ, ಅರುಣಾಚಲದಲ್ಲಿ ಮಳೆ ಆರ್ಭಟ | 14 ಮಂದಿ ಸಾವು: ಜನಜೀವನ ಅಸ್ತವ್ಯಸ್ತ

ಪಿಟಿಐ
Published 31 ಮೇ 2025, 19:30 IST
Last Updated 31 ಮೇ 2025, 19:30 IST
<div class="paragraphs"><p>ಅಸ್ಸಾಂನ ಕಾಮರೂಪ್‌ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿಯು ಭಾಗಶಃ ಕೊಚ್ಚಿ ಹೋಗಿದೆ</p></div>

ಅಸ್ಸಾಂನ ಕಾಮರೂಪ್‌ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ರಾಷ್ಟ್ರೀಯ ಹೆದ್ದಾರಿಯು ಭಾಗಶಃ ಕೊಚ್ಚಿ ಹೋಗಿದೆ

   

–ಪಿಟಿಐ ಚಿತ್ರ

ಗುವಾಹಟಿ/ ಇಟಾನಗರ: ಮಳೆ ಸಂಬಂಧಿತ ಅವಘಡಗಳಿಂದಾಗಿ ಅರುಣಾಚಲ ಪ್ರದೇಶ ಮತ್ತು ಅಸ್ಸಾಂನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, 14 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಅಸ್ಸಾಂನಲ್ಲಿ 24 ತಾಸಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಸಿಲುಕಿ ಐವರು ಮೃತಪಟ್ಟಿದ್ದಾರೆ. ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಶನಿವಾರ ತಿಳಿಸಲಾಗಿದೆ.

10,000ಕ್ಕೂ ಅಧಿಕ ಮಂದಿ ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರಿಗಾಗಿ ಎರಡು ಶಿಬಿರಗಳು ಮತ್ತು ಒಂದು ಪರಿಹಾರ ಸಾಮಗ್ರಿ ವಿತರಣಾ ಕೇಂದ್ರವನ್ನು ತೆರೆಯಲಾಗಿದೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರವು, ‘ಕಾಮರೂಪ್‌ ಮೆಟ್ರೊಪಾಲಿಟನ್‌ ಜಿಲ್ಲೆಯಲ್ಲಿ ಈ ಸಾವುಗಳು ಸಂಭವಿಸಿವೆ’ ಎಂದು ತಿಳಿಸಿದೆ.

ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ಸಿಬ್ಬಂದಿ ಸಂಕಷ್ಟದಲ್ಲಿ ಸಿಲುಕಿರುವ ಜನರ ಸ್ಥಳಾಂತರ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಸರ್ಕಾರಿ ನೌಕರರಿಗೆ ರಜೆ:

ಕಾಮರೂಪ್‌ ಮತ್ತು ಕಾಮರೂಪ್‌ ಮೆಟ್ರೊಪಾಲಿಟನ್‌ ಜಿಲ್ಲೆಗಳ ಸರ್ಕಾರಿ ನೌಕರರಿಗೆ ಶನಿವಾರ ವಿಶೇಷ ಸಾಂದರ್ಭಿಕ ರಜೆ ನೀಡಲಾಗಿದೆ. ಎರಡು ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ.

ಭಾರಿ ಮಳೆ ಮತ್ತು ಗಾಳಿಯಿಂದಾಗಿ ಶುಕ್ರವಾರ ಗುವಾಹಟಿ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರುಣಾಚಲದಲ್ಲಿ 9 ಮಂದಿ ಸಾವು:

ಕಳೆದ ಕೆಲವು ದಿನಗಳಿಂದ ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. 

ಪೂರ್ವ ಕಮೆಂಗ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ದಿಢೀರ್‌ ಭೂಕುಸಿತದಿಂದಾಗಿ ವಾಹನವು ರಸ್ತೆಯಿಂದ ಉರುಳಿ ಕಂದಕಕ್ಕೆ ಬಿದ್ದ ಪರಿಣಾಮ ಎರಡು ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಳಗಿನ ಸುಬನ್‌ಸಿರಿ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ  ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಜಿಲ್ಲೆಯ ಪ್ರಮುಖ ಮೂಲಸೌಕರ್ಯಗಳು ಸೇರಿದಂತೆ ಕನಿಷ್ಠ 117 ಮನೆಗಳಿಗೆಹಾನಿಯಾಗಿದೆ. ಪೊಲೀಸರು, ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳ ಸಿಬ್ಬಂದಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಮೇಲಿನ ಸುಬನ್‌ಸಿರಿ ಜಿಲ್ಲೆಯ ಪ್ರವಾಹದ ನೀರಿನಿಂದಾಗಿ ಜಿಲ್ಲಾ ಕೇಂದ್ರವಾದ ದಾಪೋರಿಜೋದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ಸಿಗಿನ್‌ ನದಿಯು ಉಕ್ಕಿ ಹರಿದ ಪರಿಣಾಮ ತಗ್ಗು ಪ್ರದೇಶಗಳು ನೀರಿನಿಂದ ಆವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ ನಲ್ಲಿ ಪ್ರವಾಸಕ್ಕೆ ಬಂದಿದ್ದ 500ಕ್ಕೂ ಹೆಚ್ಚಿನ ಪ್ರವಾಸಿಗರು ಪ್ರವಾಹದಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.

ಅಸ್ಸಾಂನ ಗುವಾಹಟಿಯಲ್ಲಿ ಭಾರಿ ಮಳೆಯಿಂದಾಗಿ ಸಂಕಷ್ಟದಲ್ಲಿ ಸಿಲುಕಿದ್ದ ಜನರನ್ನು ರಕ್ಷಣಾ ಸಿಬ್ಬಂದಿ ಸ್ಥಳಾಂತರಿಸಿದರು

ಅರುಣಾಚಲಪ್ರದೇಶ ಮೇಘಾಲಯದಲ್ಲೂ ಭಾರಿ ಮಳೆಯಾಗುತ್ತಿರುವುದು ಅಸ್ಸಾಂನಲ್ಲಿ ಅದರಲ್ಲೂ ಗುವಾಹಟಿಯಲ್ಲಿ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
– ಹಿಮಂತ್‌ ಬಿಸ್ವಾ ಶರ್ಮಾ, ಮುಖ್ಯಮಂತ್ರಿ 

ಕೇರಳ: ನೂರಾರು ಜನರ ಸ್ಥಳಾಂತರ

ತಿರುವನಂತಪುರ: ಕೇರಳದಲ್ಲಿ ಮಳೆಯ ಅಬ್ಬರ ಜೋರಾಗಿದ್ದು ತಗ್ಗು ಪ್ರದೇಶಗಳ ನೂರಾರು ಜನರನ್ನು ಆಶ್ರಯ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಕಾಸರಗೋಡಿನಲ್ಲಿ ಮಧುವಾಹಿನಿ ನದಿಯು ತುಂಬಿ ಹರಿಯುತ್ತಿದ್ದು ಹಲವು ಪ್ರದೇಶಗಳ ರಸ್ತೆಗಳು ಮನೆಗಳು ಜಲಾವೃತವಾಗಿವೆ.

ಮನೆಗಳ ನೆಲಮಹಡಿಗೆ ನೀರು ನುಗ್ಗುತ್ತಿದ್ದಂತೆಯೇ ಕೆಲವು ಜನರು ಮೊದಲ ಮಹಡಿಗೆ ಸ್ಥಳಾಂತರಗೊಂಡಿದ್ದಾರೆ. ಕಣ್ಣೂರಿನಲ್ಲಿ ಹಲವು ಮನೆಗಳ ಮುಂಭಾಗ ಮರದ ಕಂಟ್ರಿ ಬೋಟ್‌ ಮತ್ತು ಫೈಬರ್‌ ಬೋಟ್‌ ಕಟ್ಟಿರುವುದು ಕಂಡುಬರುತ್ತಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ 46 ಆಶ್ರಯ ಶಿಬಿರಗಳನ್ನು ತೆರೆಯಲಾಗಿದೆ.

1136 ಮಂದಿ ಇಲ್ಲಿ ನೆಲಸಿದ್ದಾರೆ ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ. ಆಲಪ್ಪುಳದಲ್ಲಿ 26 ಶಿಬಿರಗಳನ್ನು ತೆರೆಯಲಾಗಿದ್ದು 851 ಮಂದಿ ಆಶ್ರಯ ಪಡೆದಿದ್ದಾರೆ. ಇಲ್ಲಿ ಶುಕ್ರವಾರ ಒಂದೇ ದಿನ 19 ಮನೆಗಳು ಕುಸಿದುಬಿದ್ದಿದ್ದವು.

ಕೇರಳ ಕಣ್ಣೂರಿನಲ್ಲಿ ಪ್ರವಾಹ ಪೀಡಿತ ಪ್ರದೇಶದಿಂದ ಜನರನ್ನು ರಕ್ಷಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.