ಡೆಹರಾಡೂನ್: ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಸಮೀಪ ಇಂದು (ಭಾನುವಾರ) ಬೆಳಿಗ್ಗೆ ಹೆಲಿಕಾಪ್ಟರ್ ಪತನಗೊಂಡಿದ್ದು, ಪೈಲಟ್ ಸೇರಿದಂತೆ 7 ಮಂದಿ ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆ ಚಾರ್‌ಧಾಮ್ ಯಾತ್ರೆ ಮಾರ್ಗದಲ್ಲಿ 2 ದಿನಗಳ ಕಾಲ ಹೆಲಿಕಾಪ್ಟರ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಪರಿಸ್ಥಿತಿಯ ಕುರಿತು ಚರ್ಚಿಸಲು ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, 'ಸದ್ಯ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿದ್ದು, ಪ್ರಯಾಣಿಕರ ಸುರಕ್ಷತೆ ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಹಾಗಾಗಿ ಇಂದು ಮತ್ತು ನಾಳೆ (ಭಾನುವಾರ ಮತ್ತು ಸೋಮವಾರ) ಎರಡು ದಿನಗಳವರೆಗೆ ಹೆಲಿಕಾಪ್ಟರ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು' ಎಂದು ತಿಳಿಸಿದ್ಧಾರೆ.
ಹೆಲಿಕಾಪ್ಟರ್ ಸೇವೆ ಪುನರಾರಂಭಿಸುವ ಮೊದಲು ಪರಿಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಲು ವಿಮಾನಯಾನ ಕಂಪನಿಗಳು, ಡಿಜಿಸಿಎ (ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ) ಮತ್ತು ಯುಸಿಎಡಿಎಗೆ (ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ) ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಗಳಿಗೆ ಕಟ್ಟುನಿಟ್ಟಾದ ಎಸ್‌ಒಪಿ(ಪ್ರಮಾಣಿತ ಕಾರ್ಯಾಚರಣೆ ವಿಧಾನ) ಹೊರಡಿಸುವಂತೆ ಹಾಗೂ ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ನಿಯಂತ್ರಣ ಮತ್ತು ಕಮಾಂಡ್ ಸೆಂಟರ್ ಸ್ಥಾಪಿಸುವಂತೆ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
'ರಾಜ್ಯದಲ್ಲಿ ಹೆಲಿಕಾಪ್ಟರ್ ಕಾರ್ಯಾಚರಣೆಗಳಲ್ಲಿ ಡಿಜಿಸಿಎ ಮಾನದಂಡಗಳ ಅನುಸರಣೆಗೆ ಸಂಬಂಧಿಸಿದಂತೆ ಯಾವುದೇ ಸಡಿಲತೆ ಇರಬಾರದು. ಹಿಮಾಲಯ ಪ್ರದೇಶದಲ್ಲಿ ಹಾರಾಟ ನಡೆಸುವ ಪೈಲಟ್‌ಗಳು ಅನುಭವಿ ಎಂದು ಖಚಿತಪಡಿಸಿಕೊಳ್ಳಬೇಕು' ಎಂದೂ ಸಿಎಂ ಹೇಳಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಆನಂದ್ ಬರ್ಧನ್, ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಕಾರ್ಯದರ್ಶಿ ಸಚಿನ್ ಕುರ್ವೆ, ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್, ಯುಸಿಎಡಿಎ ಮತ್ತು ಡಿಜಿಸಿಎ ಅಧಿಕಾರಿಗಳು ಭಾಗವಹಿಸಿದ್ದರು.
ಕೇದಾರನಾಥದಿಂದ ಗುಪ್ತಕಾಶಿಯತ್ತ ಹೊರಟಿದ್ದ ಆರ್ಯನ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನ ಹೆಲಿಕಾಪ್ಟರ್ ಇಂದು ಬೆಳಿಗ್ಗೆ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಪೈಲಟ್ ಸೇರಿ 7 ಮಂದಿ ಸಾವಿಗೀಡಾಗಿದ್ದಾರೆ.
ಉತ್ತರಾಖಂಡದ ಚಾರ್‌ಧಾಮ್ ಯಾತ್ರೆ ಮಾರ್ಗದಲ್ಲಿ ಹೆಲಿಕಾಪ್ಟರ್ ಅಪಘಾತ ಅಥವಾ ತುರ್ತು ಭೂಸ್ಪರ್ಶದಂತಹ ಆತಂಕಕಾರಿ ಘಟನೆಗಳು ಆಗಾಗ ಸಂಭವಿಸುತ್ತಿವೆ. ಏಪ್ರಿಲ್ 30ರಿಂದ ಚಾರ್‌ಧಾಮ್ ಯಾತ್ರೆ ಪ್ರಾರಂಭವಾದಾಗಿನಿಂದ ಈ ಮಾರ್ಗದಲ್ಲಿ ಸಂಭವಿಸಿದ 5ನೇ ಹೆಲಿಕಾಪ್ಟರ್ ಅಪಘಾತ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.