ಟಾಂಗ್-ಲೆನ್ ಚಾರಿಟೇಬಲ್ ಟ್ರಸ್ಟ್‌ನ ನಿರ್ದೇಶಕ ಜಮ್ಯಾಂಗ್ ಅವರೊಂದಿಗೆ ಡಾ. ಪಿಂಕಿ
ಪಿಟಿಐ ಚಿತ್ರ
ಶಿಮ್ಲಾ: ವಿದ್ಯೆಗೆ ಬಡವ –ಶ್ರೀಮಂತನೆಂಬ ಭೇದವಿಲ್ಲ. ಪ್ರತಿಭೆಗೆ ತಕ್ಕ ಅವಕಾಶ ಸಿಕ್ಕರೆ ಸಾಧನೆ ಕಠಿಣವಲ್ಲ ಎನ್ನುವುದಕ್ಕೆ ಹಿಮಾಚಲ ಪ್ರದೇಶದ ಯುವತಿಯೊಬ್ಬರು ಮಾದರಿಯಾಗಿದ್ದಾರೆ.
ಬಾಲ್ಯದಲ್ಲಿ ಪೋಷಕರೊಂದಿಗೆ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಪಿಂಕಿ ಹರ್ಯಾಣ್ ಎನ್ನುವ ಯುವತಿ ಚೀನಾದಲ್ಲಿ ವೈದ್ಯಕೀಯ ಪದವಿ ಪಡೆದು ಈಗ ಭಾರತದಲ್ಲಿ ವೈದ್ಯಕೀಯ ವೃತ್ತಿ ಅಭ್ಯಾಸ ಮಾಡುತ್ತಿದ್ದಾಳೆ.
2004ರಲ್ಲಿ, ಟಿಬೆಟಿಯನ್ ನಿರಾಶ್ರಿತರ ಸನ್ಯಾಸಿ ಮತ್ತು ಧರ್ಮಶಾಲಾ ಮೂಲದ ಚಾರಿಟಬಲ್ ಟ್ರಸ್ಟ್‌ನ ನಿರ್ದೇಶಕ ಲೋಬ್ಸಾಂಗ್ ಜಮ್ಯಾಂಗ್ ಅವರು, ಪಿಂಕಿ ತಂದೆತಾಯಿಯೊಂದಿಗೆ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿದ್ದರು. ಹಲವು ದಿನಗಳ ಬಳಿಕ ಚರಣ್ ಖುದ್‌ನಲ್ಲಿರುವ ಸ್ಲಂ ಪ್ರದೇಶಕ್ಕೆ ಭೇಟಿ ನೀಡಿ ಪಿಂಕಿಯನ್ನು ಭೇಟಿ ಮಾಡಿ ಭಿಕ್ಷಾಟನೆ ಬಿಟ್ಟು ಓದಿನತ್ತ ಬರುವಂತೆ ಮಾಡಿದ್ದರು.
ಆರಂಭದಲ್ಲಿ ಪಿಂಕಿ ಓದಲು ತೆರಳುವುದಕ್ಕೆ ಆಕೆಯ ತಂದೆ ಕಾಶ್ಮೀರಿ ಲಾಲ್ ನಿರಾಕರಿಸಿದ್ದರು. ಆದರೆ ಲೋಬ್ಸಾಂಗ್ ಅವರ ಮಾತಿನ ಮೇರೆಗೆ ಒಪ್ಪಿಕೊಂಡಿದ್ದರು.
2004ರಲ್ಲಿ ಪಿಂಕಿ, ಧರ್ಮಶಾಲಾದ ದಯಾನಂದ ಪಬ್ಲಿಕ್ ಸ್ಕೂಲ್‌ಗೆ ಪ್ರವೇಶ ಪಡೆದರು. ಈ ಮೂಲಕ ಚಾರಿಟೆಬಲ್ ಟ್ರಸ್ಟ್ ಸ್ಥಾಪಿಸಿದ ನಿರ್ಗತಿಕ ಮಕ್ಕಳ ಹಾಸ್ಟೆಲ್‌ನ ಮೊದಲ ಬ್ಯಾಚ್ ವಿದ್ಯಾರ್ಥಿಗಳಲ್ಲಿ ಒಬ್ಬರಾದರು.
ಓದಿನಲ್ಲಿ ಚುರುಕಾಗಿದ್ದ ಪಿಂಕಿ, ನೀಟ್ ಪರೀಕ್ಷೆಯನ್ನು ಯಶಸ್ವಿಯಾಗಿ ಪಾಸ್ ಮಾಡಿದ್ದರು. ಆದರೆ ಖಾಸಗಿ ಕಾಲೇಜುಗಳಲ್ಲಿ ವಿಧಿಸುವ ದುಬಾರಿ ಶುಲ್ಕದಿಂದಾಗಿ ಭಾರತದಲ್ಲಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಸಿಗಲಿಲ್ಲ. ಹೀಗಿದ್ದೂ ಪ್ರಯತ್ನ ಬಿಡದ ಪಿಂಕಿ, ಯುನೈಟೆಡ್ ಕಿಂಗ್‌ಡಮ್‌ನ ಟಾಂಗ್-ಲೆನ್ ಚಾರಿಟೆಬಲ್ ಟ್ರಸ್ಟ್‌ನ ಸಹಾಯದಿಂದ, 2018 ರಲ್ಲಿ ಚೀನಾದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದರು. ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಮುಗಿಸಿ ಇತ್ತೀಚೆಗೆ ಧರ್ಮಶಾಲಾಕ್ಕೆ ಮರಳಿದ್ದಾರೆ.
20 ವರ್ಷಗಳ ಸತತ ಪ್ರಯತ್ನದಿಂದ ಪಿಂಕಿ ವೈದ್ಯೆಯಾಗಿದ್ದು, ನಿರ್ಗತಿಕರಿಗೆ, ಬಡವರಿಗೆ ಸೇವೆ ಸಲ್ಲಿಸಲು ಸದಾ ಸಿದ್ಧ ಎನ್ನುತ್ತಾರೆ. ಈ ಕುರಿತು ಪಿಟಿಐಯೊಂದಿಗೆ ಮಾತನಾಡಿದ ಅವರು, ‘ಬಾಲ್ಯದಲ್ಲಿ ಬಡತನವೇ ದೊಡ್ಡ ಹೊರೆಯಾಗಿತ್ತು. ಕುಟುಂಬದವರು ಸಂಕಷ್ಟದಲ್ಲಿರುವುದನ್ನು ನೋಡಿ ಸಂಕಟವಾಗುತ್ತಿತ್ತು. ಶಾಲೆಗೆ ಸೇರಿ ವಿದ್ಯೆ ಕಲಿಯಲು ಅವಕಾಶ ಸಿಕ್ಕಾಗ, ಬಾಲ್ಯದಲ್ಲಿ ಮೂಡಿದ್ದ ವೈದ್ಯೆಯಾಗುವ ಕನಸಿಗೆ ಜೀವ ಬಂದಿತ್ತು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.