
ಲಖನೌ: ಮಹಿಳೆಯ ಹಿಜಾಬ್ ಎಳೆದ ವಿವಾದಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಉತ್ತರ ಪ್ರದೇಶ ಸಚಿವ ಸಂಜಯ್ ನಿಶಾದ್ ಅವರು ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ.
ಸ್ಥಳೀಯ ಸುದ್ದಿ ವಾಹಿನಿಯೊಂದಿಗೆ ಮಾತನಾಡುವ ಸಂದರ್ಭ ನಿಶಾದ್ ಅವರು ನಿತೀಶ್ ಕುಮಾರ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
‘ನಿತೀಶ್ ಅವರು ಹಿಜಾಬ್ ಎಳೆದಿಲ್ಲ. ನೇಮಕಾತಿ ಪತ್ರ ಸರಿಯಾದ ವ್ಯಕ್ತಿಗೆ ನೀಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮಹಿಳೆಯ ಹಿಜಾಬ್ ಅನ್ನು ಸರಿಸಿದ್ದಾರೆ. ಜನರು ಇದರ ಬಗ್ಗೆ ತಪ್ಪು ತಿಳಿದುಕೊಳ್ಳಬಾರದು. ಅವರು ಕೂಡ ಮನುಷ್ಯರೇ, ಯಾರೂ ಅವರ ಮೇಲೆ ಮುಗಿಬೀಳಬಾರದು. ಮುಸುಕು ಮುಟ್ಟಿದ ಮಾತ್ರಕ್ಕೆ ಇಷ್ಟೊಂದು ಗಲಾಟೆ ಮಾಡಿದರೆ, ಬೇರೆಡೆ ಮುಟ್ಟಿದ್ದರೆ ಏನಾಗುತ್ತಿತ್ತು?’ ಎಂದು ಜೋರಾಗಿ ನಕ್ಕಿದ್ದಾರೆ.
ನಿಶಾದ್ ಅವರ ಹೇಳಿಕೆಗೆ ದೇಶದಾದ್ಯಂತ ಟೀಕೆ ವ್ಯಕ್ತವಾಗಿದೆ. ವಿರೋಧ ಪಕ್ಷಗಳು ನಿಶಾದ್ ಅವರನ್ನು ಮಹಿಳಾ ವಿರೋಧಿ ಎಂದು ಕರೆದಿವೆ.
ನನ್ನ ಹೇಳಿಕೆ ತಿರುಚಲಾಗಿದೆ: ನಿಶಾದ್
ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ನಿಶಾದ್, ‘ನನ್ನ ಹೇಳಿಕೆಯನ್ನು ತಿರುಚಿ ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಹೇಳಿದ್ದಾರೆ.
‘ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಹೇಳಿಕೆಯನ್ನು ಹಿಂಪಡೆದುಕೊಳ್ಳಲು ಸಿದ್ಧನಿದ್ದೇನೆ’ ಎಂದಿದ್ದಾರೆ.
‘ಭೋಜಪುರಿಯಲ್ಲಿ ಇಂತಹ ಮಾತಗಳನ್ನಾಡುವುದು ಸಾಮಾನ್ಯ. ಅದೇ ಶೈಲಿಯನ್ನು ಹಿಂದಿಯಲ್ಲಿ ಪ್ರಯೋಗಿಸಿದೆ. ಅದು ಇಷ್ಟೊಂದು ಸಮಸ್ಯೆಯಾಗುತ್ತದೆ ಎಂದು ತಿಳಿದಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿವಾದವೇನು?
ಬಿಹಾರದಲ್ಲಿ ಹೊಸದಾಗಿ ನೇಮಕಗೊಂಡ 1 ಸಾವಿರಕ್ಕೂ ಅಧಿಕ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ವೇಳೆ ಈ ಘಟನೆ ನಡೆದಿದೆ.
ನುಸ್ರತ್ ಪರ್ವೀನ್ ಎನ್ನುವವರು ಹಿಜಾಬ್ ಧರಿಸಿ ನೇಮಕಾತಿ ಪತ್ರ ಸ್ವೀಕರಿಸಲು ಬಂದಿದ್ದ ವೇಳೆ ನಿತೀಶ್ ಕುಮಾರ್ ಅವರು ‘ಇದೇನು?’ ಎಂದು ಹೇಳಿ ಹಿಜಾಬ್ ಅನ್ನು ಕಳಚಲು ಯತ್ನಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.