ADVERTISEMENT

ಕೋವಿಡ್‌–19: ಹಿಂದೂ–ಮುಸ್ಲಿಂ ಪ್ರತ್ಯೇಕಿಸಿ ಚಿಕಿತ್ಸೆ

ಅಹಮದಾಬಾದ್‌ ಸರ್ಕಾರಿ ಆಸ್ಪತ್ರೆಯಲ್ಲಿ ಕ್ರಮ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 0:38 IST
Last Updated 16 ಏಪ್ರಿಲ್ 2020, 0:38 IST
   

ಅಹಮದಾಬಾದ್‌: ಇಲ್ಲಿನ ಅಸರ್ವಾದಲ್ಲಿ ಸರ್ಕಾರ ಸ್ಥಾಪಿಸಿರುವ 1,200 ಹಾಸಿಗೆಯ ಕೋವಿಡ್‌–19 ಆಸ್ಪತ್ರೆಯಲ್ಲಿ ಹಿಂದೂ ಮತ್ತು ಮುಸ್ಲಿಂ ರೋಗಿಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ವಿವಾದಕ್ಕೀಡಾಗಿದೆ.

ಸದ್ಯ, ಆಸ್ಪತ್ರೆಯಲ್ಲಿ 150 ರೋಗಿಗಳಿದ್ದು, ಈ ಪೈಕಿ 40 ರಿಂದ 45 ಮುಸ್ಲಿಮರಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ.

‘ಮೂರು ದಿನಗಳಿಂದ ಈ ರೀತಿ ಪ್ರತ್ಯೇಕಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ADVERTISEMENT

‘ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನೇ ಇಲ್ಲಿ ಪಾಲಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚಿಗೆ ಏನೂ ಹೇಳುವುದಿಲ್ಲ’ ಎಂದು ಆಸ್ಪತ್ರೆಯ ವೈದ್ಯಕೀಯ ಸೂಪರಿಂಟೆಂಡೆಂಟ್‌ ಜಿ.ಎಚ್‌.ರಾಠೋಡ್‌ ಹೇಳಿದರು.

‘ಆಸ್ಪತ್ರೆಯಲ್ಲಿ ಈ ರೀತಿ ರೋಗಿಗಳನ್ನು ಪ್ರತ್ಯೇಕಿಸಿ, ಚಿಕಿತ್ಸೆ ನೀಡುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ರೀತಿ ಮಾಡುವಂತೆ ಸರ್ಕಾರದಿಂದಲೂ ನಿರ್ದೇಶನ ಬಂದಿಲ್ಲ’ ಎಂದು ಅಹಮದಾಬಾದ್‌ ಜಿಲ್ಲಾಧಿಕಾರಿ ಕೆ.ಕೆ.ನಿರಾಲಾ ಪ್ರತಿಕ್ರಿಯಿಸಿದರು.

ಆರೋಗ್ಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌ ಅವರನ್ನು ಸಂಪರ್ಕಿಸುವ ಪ್ರಯತ್ನಗಳು ಫಲನೀಡಲಿಲ್ಲ.

‘ಎರಡು ದಿನಗಳ ಹಿಂದೆ, ರಾತ್ರಿ 11ಕ್ಕೆ ನಮಗೆ ಸ್ಥಳ ಬದಲಿಸುವಂತೆ ಹೇಳಲಾಯಿತು. ಇದಕ್ಕೆ ಕಾರಣ ಏನು ಎಂಬುದನ್ನು ಹೇಳಲಿಲ್ಲ. ಆದರೆ, ಕೇವಲ ಮುಸ್ಲಿಂ ಪುರುಷ ಮತ್ತು ಮಹಿಳಾ ರೋಗಿಗಳನ್ನು ಸ್ಥಳಾಂತರ ಮಾಡಲಾಗಿದೆ ಎಂಬುದು ನಂತರ ತಿಳಿಯಿತು’ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌–19 ರೋಗಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಓಡಾಟ ನಿರ್ಬಂಧಿಸಲು ಈ ಕ್ರಮ’

‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ರೋಗಿಗಳು ವಾರ್ಡ್‌ನಲ್ಲಿ ತಿರುಗಾಡುತ್ತಾ, ಕಾಲ ಕಳೆಯುತ್ತಾರೆ. ಅವರನ್ನು ಭೇಟಿ ಮಾಡಲು ಸಾಕಷ್ಟು ಜನ ಸಂಬಂಧಿಗಳೂ ಬರುತ್ತಾರೆ. ಇದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು’ ಎಂಬುದಾಗಿ ಹಲವಾರು ವೈದ್ಯರು, ನರ್ಸ್‌ಗಳು ದೂರಿದರು ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘50ಕ್ಕೂ ಹೆಚ್ಚು ಶಂಕಿತರಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳು ಈ ರೀತಿ ಎಲ್ಲೆಂದರಲ್ಲಿ ಓಡಾಡುವುದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ರೋಗಿಗಳನ್ನು ಪ್ರತ್ಯೇಕಿಸಲಾಗಿದೆ. ಈ ನಿರ್ಧಾರಕ್ಕೂ ರೋಗಿಗಳ ನಂಬಿಕೆಗೂ ಯಾವುದೇ ಸಂಬಂಧ ಇಲ್ಲ’ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.