ಸಂಭಲ್‌ನಲ್ಲಿ ಬಿಗಿ ಭದ್ರತೆ
– ಪಿಟಿಐ ಚಿತ್ರ
ಸಂಭಲ್: ಭಾರಿ ಪೊಲೀಸ್ ಭದ್ರತೆ ನಡುವೆ ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಹೋಳಿ ಹಾಗೂ ಮುಸ್ಲಿಮರ ಶುಕ್ರವಾರ ಪ್ರಾರ್ಥನೆ ಒಂದೇ ದಿನ ಇದ್ದಿದ್ದರಿಂದ ವಿವಾದಿತ ಸಂಭಲ್ ಮಸೀದಿ ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸರು ಸರ್ಪಗಾವಲನ್ನು ನಿರ್ಮಿಸಿದ್ದರು.
ಸಂಭಲ್ ನಗರದಲ್ಲಿ ಸಾಂಪ್ರದಾಯಿಕ ‘ಚೌಪಾಯಿ ಕಾ ಜುಲುಸ್’ ಕೂಡ ನಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮೊಘಲ್ ಕಾಲದ ಶಾಹಿ ಜುಮಾ ಮಸೀದಿಯ ಸಮೀಕ್ಷೆ ನಡೆಸಲು ಕೋರ್ಟ್ ಅನುಮತಿ ನೀಡಿದ ಬೆನ್ನಲ್ಲೇ, ಕಳೆದ ವರ್ಷ ನವೆಂಬರ್ 24ರಂದು ಸಂಭಲ್‌ನಲ್ಲಿ ನಡೆದ ಹಿಂಸಾಚಾರದಲ್ಲಿ 4 ಮಂದಿ ಸಾವಿಗೀಡಾಗಿದ್ದರು. ಪೊಲೀಸ್ ಸಿಬ್ಬಂದಿ ಸೇರಿ ಹಲವರು ಗಾಯಗೊಂಡಿದ್ದರು.
ಶುಕ್ರವಾರದ ನಮಾಜ್ ಮಧ್ಯಾಹ್ನ 2.30ಕ್ಕೆ ನಡೆಯಿತು. ಹಬ್ಬ ಹಾಗೂ ಶುಕ್ರವಾರದ ಪ್ರಾರ್ಥನೆಯನ್ನು ಸಾಮರಸ್ಯ ಮನೋಭಾವದಿಂದ ಆಚರಿಸಬೇಕು ಎಂದು ಮಸೀದಿಯ ಅಧ್ಯಕ್ಷ ಜಫರ್ ಅಲಿ ಈ ಹಿಂದೆ ಎರಡೂ ಸಮುದಾಯದವರೊಂದಿಗೆ ಭಿನ್ನವಿಸಿಕೊಂಡಿದ್ದರು.
ಗುರುವಾರ ಸಂಜೆ ಜಿಲ್ಲೆಯಲ್ಲಿ ಸುಮಾರು 1,212 ಹೋಳಿ ದಹನ ಶಾಂತಿಯುತವಾಗಿ ನಡೆದಿದೆ. ಜನರು ಸಾಂಪ್ರದಾಯಿಕವಾಗಿ ಹೋಳಿ ಆಚರಿಸಿದ್ದಾರೆ. 60ಕ್ಕೂ ಹೆಚ್ಚು ಮೆರವಣಿಗೆಗಳು ಬಿಗಿ ಭದ್ರತೆಯೊಂದಿಗೆ ನಡೆದಿದೆ’ ಎಂದು ಸಂಭಲ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಹೇಳಿದ್ದಾರೆ.
ಎಲ್ಲವೂ ಸಾಂಗವಾಗಿ ನೆರವೇರಲು ಮೂರು ಸುತ್ತಿನ ಭದ್ರತೆ ನಿರ್ಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.