ರಾಜ ರಘುವಂಶಿ ಮತ್ತು ಸೋನಮ್
ಚಿತ್ರ: ಎಕ್ಸ್
ಇಂದೋರ್: ಮೇ11ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಧ್ಯಪ್ರದೇಶದ ಇಂದೋರ್‌ನ ರಾಜ ರಘುವಂಶಿ ಮತ್ತು ಸೋನಮ್ ದಂಪತಿ, ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಆದರೆ, ಅಲ್ಲಿ ಪತಿ ಶವವಾಗಿ ಪತ್ತೆಯಾದರೆ, ಪತ್ನಿ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಸುಂದರವಾಗಿ ಶುರುವಾಗಬೇಕಿದ್ದ ವಿವಾಹ ಜೀವನವು ಹನಿಮೂನ್‌ನಲ್ಲೇ ದುರಂತ ಅಂತ್ಯ ಕಂಡ ಕಥೆಯಿದು..
ಘಟನೆ ವಿವರ:
ಮೇ 11ರಂದು ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದ ರಾಜಾ ರಘುವಂಶಿ(29) ಮತ್ತು ಸೋನಮ್ ರಘುವಂಶಿ(25), ಮೇ 20ರಂದು ಹನಿಮೂನ್ ಪಯಣ ಆರಂಭಿಸುತ್ತಾರೆ.
ಮೇ 21ರಂದು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನ ಬಾಲಾಜಿ ಅತಿಥಿ ಗೃಹದಲ್ಲಿ ತಂಗುತ್ತಾರೆ.
ಮೇ 22ರ ಬೆಳಿಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದ ದಂಪತಿ, ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ(ಚಿರಾಪುಂಜಿ) ತೆರಳುತ್ತಾರೆ. ಈ ವೇಳೆ ಅವರು ಎರಡು ಲಗೇಜ್ ಬ್ಯಾಗ್ ಅನ್ನು ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25 ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದ ಅವರು ಕೊಠಡಿ ಬೇಕಾದಲ್ಲಿ ಕರೆ ಮಾಡುವುದಾಗಿಯೂ ಹೇಳಿದ್ದರು.
ಮೇ 23: ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ತಂಗುತ್ತಾರೆ. ಆ ವೇಳೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುತ್ತಾರೆ.
ಮೇ 24: ದ್ವಿಚಕ್ರ ವಾಹನವೊಂದು ಶಿಲ್ಲಾಂಗ್‌ನಿಂದ ಸೊಹ್ರಾಗೆ ಹೋಗುವ ರಸ್ತೆಯ ಕೆಫೆಯೊಂದರ ಬಳಿ ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
ಮೇ 25: ಸ್ಕೂಟರ್ ಮಾಲೀಕರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗುವ ಸೊಹ್ರಾ ಪೊಲೀಸ್ ಠಾಣೆಯ ಪೊಲೀಸರು, ಅದು ಕಾಣೆಯಾದ ರಘುವಂಶಿ ದಂಪತಿ ಬಾಡಿಗೆಗೆ ಪಡೆದಿದ್ದ ಸ್ಕೂಟರ್ ಎಂದು ಧೃಡಪಡಿಸುತ್ತಾರೆ.
ಮೇ 27: ದಂಪತಿಯನ್ನು ಸುರಕ್ಷಿತವಾಗಿ ಪತ್ತೆ ಮಾಡುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮೇಘಾಲಯ ಮುಖ್ಯಮಂತ್ರಿ ಅವರಿಗೆ ಮನವಿ ಮಾಡುತ್ತಾರೆ. ಇದರ ಬೆನ್ನಲ್ಲೇ ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ದಂಪತಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸುತ್ತಾರೆ. ಶೋಧ ಕಾರ್ಯಾಚರಣೆಗಾಗಿ ಡ್ರೋನ್‌ಗಳು, ಸ್ನಿಫರ್ ನಾಯಿಗಳನ್ನು ಸಹ ಬಳಸಿಕೊಳ್ಳಲಾಗುತ್ತದೆ.
ಜೂನ್ 2: ವೀ ಸಾವ್ಡಾಂಗ್ ಜಲಪಾತದ ಕೆಳಗಿನ ಕಮರಿಯಲ್ಲಿ ಶವವಿರುವುದನ್ನು ಡ್ರೋನ್ ಪತ್ತೆ ಮಾಡುತ್ತದೆ. ಅದು ರಾಜ ರಘುವಂಶಿ ಮೃತದೇಹವೆಂದು ಕುಟುಂಬದವರು ಗುರುತಿಸುತ್ತಾರೆ. ಸೋನಮ್‌ಗಾಗಿ ಹುಟುಕಾಟ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.