ADVERTISEMENT

ಹೊಸೂರು ವಿಮಾನ ನಿಲ್ದಾಣ: ಭೂಸ್ವಾಧೀನ ವಿಳಂಬಕ್ಕೆ ಡಿಎಂಕೆ ಸರ್ಕಾರ ನಿರ್ಧಾರ

ವಿಧಾನಸಭಾ ಚುನಾವಣೆ ಮತ್ತು ಪ್ರತಿಭಟನೆಗಳಿಂದ ಈ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:04 IST
Last Updated 6 ಫೆಬ್ರುವರಿ 2026, 16:04 IST
   

ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಮತ್ತು ಕೆಲವೆಡೆ ಭೂ ಸ್ವಾಧೀನ ವಿರೋಧಿ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಹೊಸೂರಿನ ವಿಮಾನ ನಿಲ್ದಾಣ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ವಿಳಂಬ ಮಾಡಲು ಡಿಎಂಕೆ ಸರ್ಕಾರ ನಿರ್ಧರಿಸಿದೆ. 

ವಾರ್ಷಿಕವಾಗಿ 3 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವಿರುವ ವಿಮಾನ ನಿಲ್ದಾಣ ನಿರ್ಮಿಸಲು ಸರ್ಕಾರ ತನ್ನ ಒಡೆತನದ 800 ಎಕರೆ ಸೇರಿದಂತೆ ಸುಮಾರು 3,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದೆ.  

ಹೊಸೂರು– ಬೈರಿಗೆ– ಬಾಗಲೂರು– ಶೂಲಗಿರಿಗಳಲ್ಲಿ ವಿಮಾನ ನಿಲ್ದಾಣ ತಲೆಯೆತ್ತಲಿದ್ದು, 12 ಗ್ರಾಮಗಳಿಂದ 2,979 ಎಕರೆಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ತಮಿಳುನಾಡು ಸರ್ಕಾರ ಯೋಜಿಸಿದೆ.  

ADVERTISEMENT

ಇದಕ್ಕಾಗಿ ಕೃಷಿ ಭೂಮಿ ಸೇರಿದಂತೆ 2,134 ಎಕರೆ ಖಾಸಗಿ ಜಮೀನನ್ನು ವಶಕ್ಕೆ ಪಡೆಯಬೇಕಾಗಿದೆ. 12 ಹಳ್ಳಿಗಳ ಪೈಕಿ 10 ಹಳ್ಳಿಗಳು ಹೊಸೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಬಂದರೆ, ಇನ್ನೆರಡು ಗ್ರಾಮಗಳು ಶೂಲಗಿರಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.   

ಮತ್ತೊಂದು ಪತ್ರ ಬರೆಯಲು ಸಿದ್ಧತೆ: ‘ಎಚ್‌ಎಎಲ್‌ ಕಾರ್ಯಾಚರಣೆಗಳ ಕಾರಣ ವಾಯುಪ್ರದೇಶ ಲಭ್ಯವಿಲ್ಲ ಎಂದು ಕೇಂದ್ರ ಸರ್ಕಾರ ಜನವರಿಯಲ್ಲಿ ಪತ್ರ ಮೂಲಕ ತಿಳಿಸಿದೆ. ಇದನ್ನು ಪರಿಶೀಲಿಸುತ್ತಿದ್ದೇವೆ. ಹೊಸೂರಿನಲ್ಲಿ ವಿಮಾನ ನಿಲ್ದಾಣದ ಅಗತ್ಯವನ್ನು ಮತ್ತು ಈ ಸೌಲಭ್ಯವು ಬೆಂಗಳೂರಿಗೂ ಹೇಗೆ ಉಪಯುಕ್ತವಾಗಲಿದೆ ಎಂಬುದನ್ನು ಉಲ್ಲೇಖಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತೊಂದು ಪತ್ರ ಬರೆಯುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.   

2033ರವರೆಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಬಿಐಎಎಲ್‌) 150 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ವಿಮಾನ ನಿಲ್ದಾಣ ನಿರ್ಮಿಸಲು ಸಾಧ್ಯವಿಲ್ಲ. ಹೊಸ ವಿಮಾನ ನಿಲ್ದಾಣಕ್ಕೆ ಬಿಐಎಎಲ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಬೇಕಿದೆ. ಹೀಗಾಗಿ ಈ ಕುರಿತ ಒಪ್ಪಂದದ ಅವಧಿ ಮುಗಿದ ಬಳಿಕ ವಿನಾಯಿತಿ ಪಡೆಯಲು ಸರ್ಕಾರ ಮುಂದಾಗಬಹುದು ಎಂದು ಮೂಲಗಳು ತಿಳಿಸಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.