ADVERTISEMENT

ಅಭಿಪ್ರಾಯ ಭೇದದ ಮೇಲಿನ ಅಮಾನವೀಯ ದಾಳಿ: ಜೆಎನ್‌ಯು ದಾಂದಲೆಗೆ ದೇಶಾದ್ಯಂತ ಟೀಕೆ

ಏಜೆನ್ಸೀಸ್
Published 6 ಜನವರಿ 2020, 3:07 IST
Last Updated 6 ಜನವರಿ 2020, 3:07 IST
   

ನವದೆಹಲಿ: ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕರ ಮೇಲೆ ಮುಸುಕುಧಾರಿ ದುಷ್ಕರ್ಮಿಗಳು ಭಾನುವಾರ ರಾತ್ರಿ ನಡೆಸಿದ ದಾಳಿಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇದು ‘ಅಭಿಪ್ರಾಯ ಭೇದದ ಮೇಲಿನ ಅಮಾನವೀಯ ದಾಳಿ’ ಎಂದೇ ವಿಶ್ಲೇಷಿಸಲಾಗುತ್ತಿದೆ.

ಹಾಸ್ಟೆಲ್‌ ಶುಲ್ಕ ಹೆಚ್ಚಳ, ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವಿರುದ್ಧ ವಿದ್ಯಾರ್ಥಿಗಳು ಹಲವು ದಿನಗಳಿಂದಲೂ ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿಗಳ ಗುಂಪುಭಾನುವಾರ ರಾತ್ರಿ ದಾಳಿ ನಡೆಸಿದೆ.

ಅತ್ತ ದೆಹಲಿಯ ಜೆಎನ್‌ಯುನಲ್ಲಿ ದಾಳಿ ನಡೆಯುತ್ತಲೇ ಇತ್ತ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಕಾಲೇಜು ವಿದ್ಯಾರ್ಥಿಗಳು ಬೀದಿಗಿಳಿದರು. ಮುಂಬೈನ ಗೇಟ್‌ ವೇ ಆಫ್‌ ಇಂಡಿಯಾದ ಬಳಿ ಮಧ್ಯರಾತ್ರಿಯಲ್ಲೂ ಸಮಾವೇಶಗೊಂಡ ವಿದ್ಯಾರ್ಥಿಗಳು ದಾಳಿಕೋರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ವಿದ್ಯಾರ್ಥಿಗಳ ಘೋಷಣೆಗಳು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ವಿರುದ್ಧವೇ ಇದ್ದವು. ಜೆಎನ್‌ಯು ದಾಳಿ ನಡೆಸಿದ್ದು ಎಬಿವಿಪಿ ಕಾರ್ಯಕರ್ತರೇ ಎಂದು ಅವರು ನೇರವಾಗಿ ಆರೋಪಿಸಿದರು.

ಇನ್ನೊಂದೆಡೆ ಹೈದರಾಬಾದ್‌ನ ಅಲಿಘಡ ವಿವಿಯಲ್ಲೂ ಪ್ರತಿಭಟನೆಗಳು ನಡೆದವು. ಮೇಣದ ಬತ್ತಿ ಹಚ್ಚಿ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು ಘಟನೆ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದರು.

ದೆಹಲಿಯ ಜಾಮಿಯ ಮಿಲಿಯಾ ಇಸ್ಲಾಮಿಯ ವಿವಿ ಬೋಧಕರ ಸಂಘವೂ (ಜೆಟಿಎ) ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ವಿದ್ಯಾರ್ಥಿಗಳು, ಬೋಧಕರನ್ನು ಕೊಲ್ಲಲೆಂದೇ ಮಾರಕಾಸ್ತ್ರಗಳೊಂದಿಗೆ ಗೂಂಡಾಗಳು ವಿವಿಯ ಆವರಣದೊಳಗೆ ಬಂದಿದ್ದಾರೆ ಎಂಬುದನ್ನು ಕೇಳುವುದಕ್ಕೇ ಭಯವಾಗುತ್ತದೆ. ಇದೆಲ್ಲವೂ ಬೆದರಿಕೆ ಪ್ರಯತ್ನಗಳು ಎಂದು ಸಂಘಟನೆ ಆರೋಪಿಸಿದೆ.
ಜೆಎನ್‌ಯುನಲ್ಲಿ ನಡೆಯುತ್ತಿದ್ದ ದಾಂದಲೆಗೆ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಮೂಖ ಪ್ರೇಕ್ಷಕರಾಗಿದ್ದರು ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಇನ್ನು ಘಟನೆಯ ನಂತರ ದೆಹಲಿಯ ಪೊಲೀಸ್‌ ಪ್ರಧಾನ ಕಚೇರಿ ಬಳಿ ಜಮಾವಣೆಗೊಂಡ ನೂರಾರು ಮಂದಿ, ದಾಳಿಯ ವಿಚಾರದಲ್ಲಿ ಪೊಲೀಸರ ನಿಷ್ಕ್ರಿಯತೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ‘ಜೆಎನ್‌ಯು ಮೇಲೆ ದಾಳಿ ನಡೆದ ವಿಚಾರ ತಿಳಿಯುತ್ತಲೇ ನಾವು ಇಲ್ಲಿಗೆ ಆಘಾತಗೊಂಡು ಬಂದಿದ್ದೇವೆ. ದೇಶದ ಪ್ರತಿ ನಾಗರಿಕರು ಮತ್ತು ವಿದ್ಯಾರ್ಥಿಗಳನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಸದ್ಯ ದಾಳಿಗೆ ಒಳಗಾಗಿರುವ ವಿದ್ಯಾರ್ಥಿಗಳ ಪೋಷಕರ ಮನಸ್ಥಿತಿ ಹೇಗಿರಬಹುದು ಎಂದು ಪೊಲೀಸರು ಆಲೋಚಿಸಿದ್ದಾರಾ?’ ಎಂದು ಪ್ರಶ್ನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.