ADVERTISEMENT

ಬಿಹಾರ: ಭಾಗಲ್‌ಪುರದ ಹದಗೆಟ್ಟಿದ್ದ ಆಸ್ಪತ್ರೆಗೆ ವರದಾನವಾದ ಕೋವಿಡ್ ಸಾಂಕ್ರಾಮಿಕ!

ರಾಯಿಟರ್ಸ್
Published 17 ನವೆಂಬರ್ 2021, 11:42 IST
Last Updated 17 ನವೆಂಬರ್ 2021, 11:42 IST
ಭಾಗಲ್‌ಪುರದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ – ರಾಯಿಟರ್ಸ್ ಚಿತ್ರ
ಭಾಗಲ್‌ಪುರದ ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ – ರಾಯಿಟರ್ಸ್ ಚಿತ್ರ   

ಭಾಗಲ್‌ಪುರ: ಕೋವಿಡ್–19 ಸಾಂಕ್ರಾಮಿಕದ ಮೊದಲ ಅಲೆಯ ಸಂದರ್ಭದಲ್ಲಿ ಬಿಹಾರದ ಭಾಗಲ್‌ಪುರದ ‘ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು (ಜೆಎಲ್‌ಎನ್‌ಎಂಸಿಎಚ್)’ ದೇಶದ ಗ್ರಾಮಾಂತರ ಪ್ರದೇಶಗಳ ಆರೋಗ್ಯ ಮೂಲಸೌಕರ್ಯ ವ್ಯವಸ್ಥೆಯ ದಯನೀಯ ಸ್ಥಿತಿಗೆ ಉದಾಹರಣೆಯಾಗಿತ್ತು. ಆದರೆ, ಕೋವಿಡ್‌ ಕಲಿಸಿದ ಪಾಠದಿಂದಾಗಿ ಈಗ ಎಲ್ಲವೂ ಬದಲಾಗಿದೆ. ಆಸ್ಪತ್ರೆಯ ಮೂಲಸೌಕರ್ಯದಲ್ಲಿ ಆಮೂಲಾಗ್ರ ಬದಲಾವಣೆ ಕಂಡುಬಂದಿದೆ.

ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ತೀವ್ರ ನಿಗಾ ಘಟಕಗಳು (ಐಸಿಯು) ಮತ್ತು ವಾರ್ಡ್‌ಗಳು ಸೋಂಕಿತರಿಂದ ತುಂಬಿ ತುಳುಕುತ್ತಿದ್ದವು. ಸೋಂಕಿತರ ಆರೋಗ್ಯ ವಿಚಾರಿಸಲು ವಾರ್ಡ್‌ಗಳಿಗೆ ತೆರಳುವ ವೈದ್ಯರಿಗೆ ಭದ್ರತೆ ನೀಡಬೇಕಾದ ಪರಿಸ್ಥಿತಿ ಇತ್ತು. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಕೇವಲ 800 ಬೆಡ್‌ಗಳನ್ನು ಬಳಸಿಕೊಂಡು ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡಬೇಕಾದ ಸವಾಲು ಎದುರಿಸಬೇಕಾಗಿತ್ತು ಎಂದಿದ್ದಾರೆ ವೈದ್ಯರು.

ಆದರೆ ಕೋವಿಡ್ ಸಾಂಕ್ರಾಮಿಕದಿಂದಾಗಿ ಆರೋಗ್ಯ ಕ್ಷೇತ್ರದ ಮೇಲಿನ ಹೂಡಿಕೆ ಹೆಚ್ಚಾಗಿರುವುದರಿಂದ ‘ಜವಾಹರಲಾಲ್ ನೆಹರು’ ಆಸ್ಪತ್ರೆಗೆ ಜೀವ ಕಳೆ ಬರುತ್ತಿದೆ ಎನ್ನಲಾಗಿದೆ.

ಆಸ್ಪತ್ರೆಯಲ್ಲಿ ಈಗ ಆಮ್ಲಜನಕ ಜನರೇಟರ್‌ಗಳನ್ನು ಸ್ಥಾಪಿಸಲಾಗಿದೆ. ಇವು ಆಸ್ಪತ್ರೆಯ ಎಲ್ಲ ಬೇಡಿಕೆಯನ್ನು ಪೂರೈಸುತ್ತವೆ. ಹತ್ತಾರು ಶುಶ್ರೂಷಕಿಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಐಸಿಯುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗಿದೆ. ನೂರಾರು ಬೆಡ್‌ಗಳಿಗೆ ಆಮ್ಲಜನಕ ಪೂರೈಕೆ ಸಂಪರ್ಕ ಕಲ್ಪಿಸಲಾಗಿದೆ ಎಂದು ಆಸ್ಪತ್ರೆಯ ಅಧೀಕ್ಷಕ ಅಸೀಮ್ ಕುಮಾರ್ ದಾಸ್ ತಿಳಿಸಿದ್ದಾರೆ.

ಭಾಗಲ್‌ಪುರದಲ್ಲಿ 200 ಹಾಸಿಗೆಗಳ ಅತ್ಯಾಧುನಿಕ ಆಸ್ಪತ್ರೆ ನಿರ್ಮಾಣ ಯೋಜನೆ ಕೆಲವು ವರ್ಷಗಳ ಹಿಂದೆ ಹಮ್ಮಿಕೊಳ್ಳಲಾಗಿತ್ತು. ಅದರ ಕಾಮಗಾರಿ ಈಗ ವೇಗ ಪಡೆದುಕೊಂಡಿದ್ದು, ಮುಂದಿನ ವರ್ಷದ ಮೊದಲಾರ್ಧದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ರಾಯಿಟರ್ಸ್ ಸುದ್ದಿಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅಸೀಮ್ ಕುಮಾರ್ ದಾಸ್, ‘ಕೋವಿಡ್ ನಮಗೆ ವರದಾನವಾಯಿತು. ಅದರಿಂದಾಗಿ ಆಸ್ಪತ್ರೆಯ ಮೂಲಸೌಕರ್ಯದಲ್ಲಿ ಅನೇಕ ಬದಲಾವಣೆಗಳಾಗಿವೆ’ ಎಂದಿದ್ದಾರೆ.

ಇನ್ನೂ 200 ಹಾಸಿಗೆಗಳನ್ನು ಅಳವಡಿಸುವ ಬಗ್ಗೆ ಸರ್ಕಾರದ ಜತೆ ಮಾತುಕತೆ ನಡೆಯುತ್ತಿದೆ. ಅದಕ್ಕೆ ತಕ್ಕಂತೆ ಮಾನವಸಂಪನ್ಮೂಲಗಳನ್ನೂ ನಿಯೋಜಿಸಲಾಗುವುದು. ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯ ಕೊರತೆ ಇದೆ ಎಂದೂ ಅವರು ತಿಳಿಸಿದ್ದಾರೆ.

ಇದೇ ರೀತಿ ದೇಶದ ಇತರ ಅನೇಕ ಭಾಗಗಳಲ್ಲಿಯೂ ಆರೋಗ್ಯ ಮೂಲಸೌಕರ್ಯದ ಬಗ್ಗೆ ಗಮನಹರಿಸಲಾಗುತ್ತಿರುವುದು ಸರ್ಕಾರಿ ಅಂಕಿಅಂಶಗಳಿಂದ ತಿಳಿದುಬಂದಿದೆ.

ಆಮ್ಲಜನಕಕ್ಕಾಗಿ ಹರಿದು ಬಂದ ನಿಧಿ...

ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಮ್ಲಜನಕ ಕೊರತೆಯಿಂದಾಗಿ ಕೇಂದ್ರ ಸರ್ಕಾರ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆ ಬಳಿಕ, ಪ್ರತಿ ಜಿಲ್ಲೆಗಳ ಕನಿಷ್ಠ ಒಂದು ಆಸ್ಪತ್ರೆಯಲ್ಲಾದರೂ ಆಮ್ಲಜನಕ ಜನರೇಟರ್‌ಗಳು ಇರುವಂತೆ ನೋಡಿಕೊಳ್ಳುವುದಕ್ಕಾಗಿ ಆಸ್ಪತ್ರೆಗಳಿಗೆ ಸರ್ಕಾರ ಹಾಗೂ ಸರ್ಕಾರಿ ಸ್ವಾಮ್ಯದ ಕಂಪನಿಗಳು ಅನುದಾನ ನೀಡಿದ್ದವು. ಸುಮಾರು 4,000 ಆಮ್ಲಜನಕ ಜನರೇಟರ್‌ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಹೊಸ ಆಸ್ಪತ್ರೆಗಳ ಸ್ಥಾಪನೆಗೂ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು ₹66,833.82 ಕೋಟಿ (9 ಶತಕೋಟಿ ಡಾಲರ್) ಹೂಡಿಕೆ ಮಾಡಲಿದೆ ಎನ್ನಲಾಗಿದೆ.

ಅನೇಕ ರಾಜ್ಯಗಳು ಆರೋಗ್ಯ ಕ್ಷೇತ್ರದಲ್ಲಿನ ಹೂಡಿಕೆಯನ್ನು ದ್ವಿಗುಣಗೊಳಿಸಲು ಚಿಂತನೆ ನಡೆಸಿವೆ ಎಂದೂ ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಮುಂದಿನ ವರ್ಷದ ವೇಳೆಗೆ ಬಿಹಾರದಲ್ಲಿ ₹3,713.46 ಕೋಟಿ (500 ದಶಲಕ್ಷ ಡಾಲರ್) ವೆಚ್ಚದಲ್ಲಿ 1,600 ಹೊಸ ಆಸ್ಪತ್ರೆ ಕಟ್ಟಡಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಇದೊಂದು ಉತ್ತಮ ಬೆಳವಣಿಗೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ‘ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್‌ ಇಂಡಿಯಾ’ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷ, ಹೃದ್ರೋಗ ಹಾಗೂ ಸಾಂಕ್ರಾಮಿಕ ರೋಗಗಳ ತಜ್ಞ ಡಾ. ಕೆ.ಶ್ರೀನಾಥ್ ರೆಡ್ಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.