ನಿಖಿಲ್ ಕಾಮತ್ ಹಾಗೂ ನರೇಂದ್ರ ಮೋದಿ
ನವದೆಹಲಿ: 'ನಾನೂ ಮನುಷ್ಯನೇ, ದೇವರಲ್ಲ. ತಪ್ಪುಗಳು ಸಂಭವಿಸುವುದು ಸಹಜ. ನನ್ನಿಂದಲೂ ತಪ್ಪುಗಳು ಆಗಿವೆ' ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ‘ಹಾನಿ ನಿಯಂತ್ರಣಕ್ಕೆ ನಡೆಸುತ್ತಿರುವ ಪ್ರಯತ್ನವಷ್ಟೇ’ ಎಂದಿದೆ.
'ಝೆರೋದಾ' ಸಹ ಸಂಸ್ಥಾಪಕ ನಿಖಿಲ್ ಕಾಮತ್ ನಡೆಸಿಕೊಟ್ಟಿರುವ ಪಾಡ್‌ಕಾಸ್ಟ್‌ನಲ್ಲಿ ಪ್ರಧಾನಿ ಮೋದಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ್ದರು.
ಅಲ್ಲಿ ಆಡಿರುವ ಮಾತುಗಳ ಕುರಿತು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ಎಂಟು ತಿಂಗಳ ಹಿಂದೆಯಷ್ಟೇ ಅಜೈವಿಕ ಸ್ಥಿತಿಯನ್ನು ಘೋಷಿಸಿಕೊಂಡ ವ್ಯಕ್ತಿಯಿಂದ ಹೊರಹೊಮ್ಮಿದ ಮಾತುಗಳಿವು. ಇದು ಸ್ಪಷ್ಟವಾಗಿ ಹಾನಿ ನಿಯಂತ್ರಣ ಪ್ರಯತ್ನವಷ್ಟೇ’ ಎಂದಿದ್ದಾರೆ.
ಪಾಡ್‌ಕಾಸ್ಟ್‌ನಲ್ಲಿ ಎರಡು ಗಂಟೆಗಳ ಸುದೀರ್ಘ ಮಾತುಕತೆಯಲ್ಲಿ, ‘ನಾನು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಒಂದು ಭಾಷಣ ನೀಡಿದ್ದೆ. ನಾನು ಕಠಿಣ ಕೆಲಸಗಳನ್ನು ನಿರ್ವಹಿಸಲು ಹಿಂಜರಿಯುವುದಿಲ್ಲ. ನನಗಾಗಿ ಏನನ್ನೂ ಮಾಡಿಕೊಳ್ಳುವುದಿಲ್ಲ. ನಾನೂ ಒಬ್ಬ ಮನುಷ್ಯ. ತಪ್ಪುಗಳಾಗುವುದು ಸಹಜ. ಆದರೆ ಕೆಟ್ಟ ಉದ್ದೇಶಗಳಿಂದ ಯಾವುದೇ ತಪ್ಪು ಕೆಲಸ ಮಾಡುವುದಿಲ್ಲ. ಇದುವೇ ನನ್ನ ಬದುಕಿನ ಮಂತ್ರ. ಪ್ರತಿಯೊಬ್ಬರೂ ತಪ್ಪುಗಳನ್ನು ಮಾಡುತ್ತಾರೆ. ಅದರಲ್ಲಿ ನಾನೂ ಒಬ್ಬ. ನಾನೇನು ದೇವರಲ್ಲ, ನಾನೂ ಒಬ್ಬ ಮನುಷ್ಯ’ ಎಂದಿದ್ದನ್ನು ನೆನಪಿಸಿಕೊಂಡಿದ್ದಾರೆ.
‘ಕೆಲ ನಿರ್ದಿಷ್ಟ ಕೆಲಸಗಳನ್ನು ಕೈಗೊಳ್ಳಲು ದೇವರೇ ನನ್ನನ್ನು ಕಳುಹಿಸಿದ್ದಾರೆ’ ಎಂದು ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಹೇಳಿದ ಮಾತುಗಳನ್ನೇ ಕಾಂಗ್ರೆಸ್ ತನ್ನ ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿತ್ತು.
‘ನನ್ನ ತಾಯಿ ಬದುಕಿದ್ದಾಗ, ನಾನೇನೋ ಜೈವಿಕವಾಗಿ ಜನಿಸಿದ್ದೇನೆ. ತಾಯಿಯ ನಿಧನದ ನಂತರ, ನಾನು ನನ್ನ ಅನುಭವವನ್ನು ಅವಲೋಕಿಸಿದಾಗ, ನನ್ನನ್ನು ದೇವರೇ ಕಳುಹಿಸಿದ್ದು ಎಂಬುದು ಖಾತ್ರಿಯಾಯಿತು. ಇದು ನನ್ನ ದೈಹಿಕ ಶಕ್ತಿಯಿಂದ ಸಾಧ್ಯವಿಲ್ಲ. ಇದು ದೇವರೇ ನೀಡಿದ ವಿಶೇಷ ಶಕ್ತಿ. ಹೀಗಾಗಿಯೇ ದೇವರು ನನಗೆ ಸಾಮರ್ಥ್ಯ, ಶಕ್ತಿ, ಪರಿಶುದ್ಧತೆ ಹಾಗೂ ಸ್ಫೂರ್ತಿ ನೀಡಿದ್ದಾರೆ. ದೇವರೇ ಕಳುಹಿಸಿದ ಸಾಧನವಲ್ಲದೇ ಬೇರೇನೂ ಅಲ್ಲ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.