ಮುಸಿ ನದಿ ಉಕ್ಕಿ ಹರಿಯುತ್ತಿರುವ ದೃಶ್ಯ
–ಪಿಟಿಐ ಚಿತ್ರ
ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್ ನಗರವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮುಸಿ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ 1,000ಕ್ಕೂ ಹೆಚ್ಚು ಜನರನ್ನು ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಪ್ರವಾಹ ಪರಿಸ್ಥಿತಿ ಕುರಿತು ಮೇಲ್ವಿಚಾರಣೆ ನಡೆಸುವ ಮೂಲಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಅಗತ್ಯವಿದ್ದರೆ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.
ಭಾರಿ ಮಳೆಯಿಂದಾಗಿ ಹೈದರಾಬಾದ್‌ನ ಅವಳಿ ಜಲಾಶಯಗಳಾದ ‘ಹಿಮಾಯತ್ ಸಾಗರ್’ ಮತ್ತು ‘ಓಸ್ಮಾನ್ ಸಾಗರ್’ನಿಂದ ನೀರನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಮುಸಿ ನದಿಯಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ತೆಲಂಗಾಣದ ಬಹುತೇಕ ಜಿಲ್ಲೆಗಳಲ್ಲಿ ಇಂದು (ಶನಿವಾರ) ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶುಕ್ರವಾರ ನಾರಾಯಣಪೇಟೆ ಜಿಲ್ಲೆಯ ನರ್ವಾದಲ್ಲಿ 44.3 ಮಿ.ಮೀ., ವಿಕಾರಾಬಾದ್ ಜಿಲ್ಲೆಯ ಮುಜಾಹಿದ್‌ಪುರದಲ್ಲಿ 40 ಮಿ.ಮೀ ಮತ್ತು ದಬೀರ್‌ಪುರದಲ್ಲಿ 28.5 ಮಿ.ಮೀ ಮಳೆಯಾಗಿದೆ ಎಂದು ‘ತೆಲಂಗಾಣ ಡೆವಲಪ್‌ಮೆಂಟ್ ಪ್ಲಾನಿಂಗ್ ಸೊಸೈಟಿ’ ತಿಳಿಸಿದೆ.
ಮಳೆಯಿಂದ ಉಂಟಾಗಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ಸಿಎಂ ರೇವಂತ್ ರೆಡ್ಡಿ ನಿರ್ದೇಶನ ನೀಡಿದ್ದಾರೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ‘ವರ್ಕ್ ಫ್ರಮ್ ಹೋಂ’ ಆಯ್ಕೆ ನೀಡುವಂತೆ ಐಟಿ ಸಂಸ್ಥೆಗಳಿಗೆ ಸೈಬರಾಬಾದ್ ಪೊಲೀಸರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.