ಸಾಂದರ್ಭಿಕ ಚಿತ್ರ
ಹೈದರಾಬಾದ್: ಭಾರತ ಮೂಲದ 26 ವರ್ಷದ ವಿದ್ಯಾರ್ಥಿಯನ್ನು ಅಪರಿಚಿತ ವ್ಯಕ್ತಿಗಳು ಅಮೆರಿಕದಲ್ಲಿ ಗುಂಡಿಕ್ಕಿ ಕೊಂದಿದ್ದಾರೆ. ತೆಲಂಗಾಣದ ಕೆ. ರವಿತೇಜ ಕೊಲೆಯಾದವರು.
‘2022ರಲ್ಲಿ ರವಿತೇಜ ಅವರು ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. ಎಂಟು ತಿಂಗಳ ಹಿಂದೆ ಎಂ.ಎಸ್. ಕೋರ್ಸ್ ಮುಗಿಸಿ, ಉದ್ಯೋಗ ಹುಡುಕುತ್ತಿದ್ದರು. ಅವರ ಪಾರ್ಥಿವ ಶರೀರವನ್ನು ಆದಷ್ಟು ಬೇಗ ಕರೆತರಲು ಸಹಾಯ ಮಾಡಿ’ ಎಂದು ಅವರ ಕುಟುಂಬದವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
‘ನನ್ನ ಮಗನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂಬ ಮಾಹಿತಿ ನನಗೆ ಬಂದಿದೆ. ಏನು ಹೇಳಬೇಕು ಎಂದೇ ಗೊತ್ತಾಗುತ್ತಿಲ್ಲ. ಆದಷ್ಟು ಬೇಗ ಶವವನ್ನು ತರಿಸಲು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ’ ಎಂದು ರವಿತೇಜ ಅವರ ತಂದೆ ಸುದ್ದಿಗಾರರಿಗೆ ಹೇಳಿದ್ದಾರೆ.
‘ಮಗನ ಪಾರ್ಥಿವ ಶರೀರ ಬರುವ ತನಕ ನಾನು ಬದುಕಿರುತ್ತೇನೋ ಇಲ್ಲವೋ ಗೊತ್ತಿಲ್ಲ’ ಎಂದು ಅವರು ಕಣ್ಣೀರು ಹಾಕಿದ್ದಾರೆ.
ಉದ್ಯೋಗ ದೊರೆತ ಬಳಿಕ ಮನೆಗೆ ಬರುವುದಾಗಿ ರವಿತೇಜ ಅವರು ತಂದೆ ಬಳಿ ಹೇಳಿದ್ದರು ಎಂದು ಅವರ ಕಟುಂಬದವರು ತಿಳಿಸಿದ್ದಾರೆ.
2024ರ ನವೆಂಬರ್‌ನಲ್ಲಿ ತೆಲಂಗಾಣದ ಖಮ್ಮಂ ಜಿಲ್ಲೆಯ 22 ವರ್ಷದ ಯುವಕನನ್ನು ಅಮೆರಿಕದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.