ADVERTISEMENT

ಬೆಂಗಳೂರಿನ ಐಐಎಸ್‌ಸಿ ಅತ್ಯುತ್ತಮ ವಿಶ್ವವಿದ್ಯಾಲಯ

ಸತತ 10ನೇ ವರ್ಷವೂ ಅಗ್ರಸ್ಥಾನ ಉಳಿಸಿಕೊಂಡ ವಿವಿ

ಪಿಟಿಐ
Published 4 ಸೆಪ್ಟೆಂಬರ್ 2025, 15:30 IST
Last Updated 4 ಸೆಪ್ಟೆಂಬರ್ 2025, 15:30 IST
 ಐಐಎಸ್‌ಸಿ ಬೆಂಗಳೂರು
 ಐಐಎಸ್‌ಸಿ ಬೆಂಗಳೂರು   

ನವದೆಹಲಿ: ಕೇಂದ್ರ ಶಿಕ್ಷಣ ಇಲಾಖೆಯು ಬಿಡುಗಡೆಗೊಳಿಸಿದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ–2025ರ (ಎನ್‌ಐಆರ್‌ಎಫ್) ಪಟ್ಟಿಯಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಸತತ 10ನೇ ವರ್ಷವೂ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹಿರಿಮೆಗೆ ಪಾತ್ರವಾಗಿದೆ.  

ಎನ್‌ಐಆರ್‌ಎಫ್‌ನ 10ನೇ ಆವೃತ್ತಿಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಗುರುವಾರ ಪ್ರಕಟಿಸಿದರು.

‘ಸಮಗ್ರ’ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌ (ಐಐಟಿ ಮದ್ರಾಸ್‌) ಸತತ 7ನೇ ವರ್ಷವೂ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಈ ವಿಭಾಗದಲ್ಲಿ ಬೆಂಗಳೂರಿನ ಐಐಎಸ್‌ಸಿ 2ನೇ ಸ್ಥಾನದಲ್ಲಿದ್ದರೆ, ಐಐಟಿ ಬಾಂಬೆ ಹಾಗೂ ಐಐಟಿ ದೆಹಲಿ ನಂತರದ ಸ್ಥಾನದಲ್ಲಿವೆ. 

ADVERTISEMENT

ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಬೆಂಗಳೂರಿನ ಐಐಎಸ್‌ಸಿ ಅಗ್ರಸ್ಥಾನದಲ್ಲಿದೆ. ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ ಮೂರನೇ ಸ್ಥಾನದಲ್ಲಿದೆ. ಕರ್ನಾಟಕದ ಈ ಸಂಸ್ಥೆಯು, ಎನ್‌ಐಆರ್‌ಎಫ್ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳಲ್ಲಿ ಸ್ಥಾನ ಪಡೆದ ಮೊದಲ ಖಾಸಗಿ ಶಿಕ್ಷಣ ಸಂಸ್ಥೆಯಾಗಿದೆ. ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಎರಡನೇ ಸ್ಥಾನದಲ್ಲಿದೆ. 

ಕಾಲೇಜುಗಳ ವಿಭಾಗದಲ್ಲಿ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜು ಮೊದಲ ಹಾಗೂ ಮಿರಾಂಡಾ ಹೌಸ್‌ ಎರಡನೇ ಸ್ಥಾನದಲ್ಲಿವೆ. ಹಂಸರಾಜ್‌ ಕಾಲೇಜು ಮತ್ತು ಕಿರೋರಿ ಮಾಲ್‌ ಕಾಲೇಜು ನಂತರದ ಸ್ಥಾನದಲ್ಲಿವೆ. 

ಎಂಜಿನಿಯರಿಂಗ್ ಕಾಲೇಜುಗಳ ಮೊದಲ 10 ಸ್ಥಾನದಲ್ಲಿವೆ 9 ಐಐಟಿಗಳಿವೆ. ಐಐಟಿ ಮದ್ರಾಸ್, ಐಐಟಿ ಬಾಂಬೆ ಹಾಗೂ ಐಐಟಿ ದೆಹಲಿ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿವೆ. ತಿರುಚನಾಪಳ್ಳಿಯ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯು (ಎನ್‌ಐಟಿ) ಪಟ್ಟಿಯಲ್ಲಿರುವ ಐಐಟಿಯೇತರ ಸಂಸ್ಥೆಯಾಗಿದೆ. 

ರಾಜ್ಯದ ಸಂಸ್ಥೆಗಳಿಗೆ ಗೌರವ:

ಸುರತ್ಕಲ್‌ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರಶಾಸ್ತ್ರ ಸಂಸ್ಥೆ,  ಕ್ರಮವಾಗಿ 54ನೇ ಹಾಗೂ 60ನೇ ಸ್ಥಾನ ಗಳಿಸಿವೆ. ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಜೆಎಸ್‌ಎಸ್ ಅಕಾಡೆಮಿ 38ನೇ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ 96ನೇ ಸ್ಥಾನ ಪಡೆದಿವೆ.

ಸರ್ಕಾರಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 50ನೇ ಸ್ಥಾನ ಪಡೆದಿದ್ದು, ರಾಜ್ಯದ ಯಾವುದೇ ಸರ್ಕಾರಿ ಕಾಲೇಜು ಟಾಪ್ 100ರಲ್ಲಿ ಸ್ಥಾನ ಪಡೆದಿಲ್ಲ.

ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಇನೋವೇಶನ್‌ ಸಂಸ್ಥೆಗಳಲ್ಲಿ ಎಂ.ಎಸ್. ರಾಮಯ್ಯ ಟೆಕ್ನಾಲಜಿ, ಕ್ರೈಸ್ಟ್‌ ವಿಶ್ವವಿದ್ಯಾಲಯ, ಐಐಟಿ ಧಾರವಾಡ, ಮ್ಯಾನೇಜ್ಮೆಂಟ್‌ ಕಾಲೇಜುಗಳಲ್ಲಿ ಅಲಯನ್ಸ್‌ ವಿಶ್ವವಿದ್ಯಾಲಯ, ವೈದ್ಯಕೀಯ ಸಂಸ್ಥೆಗಳಲ್ಲಿ ಮಣಿಪಾಲ–ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜುಗಳು, ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಬೆಳಗಾವಿಯ ಜೆಎನ್‌ಎಂಸಿ, ಎಂ.ಎಸ್. ರಾಮಯ್ಯ ಕಾಲೇಜು ಸ್ಥಾನ ಪಡೆದಿವೆ.

‘ಕೆಲ ವಿಶ್ವವಿದ್ಯಾಲಯಗಳು ಎನ್‌ಐಆರ್‌ಎಫ್‌ಗೆ ಅರ್ಜಿ ಸಲ್ಲಿಸಿಲ್ಲ. ಬೋಧಕ ಸಿಬ್ಬಂದಿ ಕೊರತೆ, ಸಂಶೋಧನಾ ಚಟುವಟಿಕೆಗಳ ಸ್ಥಗಿತದ ಕಾರಣ ಕೆಲವು ಮಾನ್ಯತೆ ಕಳೆದುಕೊಂಡಿವೆ. ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಭಾಗಿಯಾದರೆ ರಾಜ್ಯಕ್ಕೆ ಇನ್ನೂ ಹೆಚ್ಚಿನ ಸ್ಥಾನಗಳು ಲಭಿಸಲಿವೆ’ ಎನ್ನುತ್ತಾರೆ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಪ್ರಮುಖ ವಿಭಾಗಗಳು

* ಮ್ಯಾನೇಜ್‌ಮೆಂಟ್‌ ಕಾಲೇಜುಗಳ ವಿಭಾಗದಲ್ಲಿ ಅಹಮದಾಬಾದ್‌ನ ಐಐಎಂ ಮೊದಲ ಸ್ಥಾನಲ್ಲಿದ್ದರೆ ಐಐಎಂ ಬೆಂಗಳೂರು ಎರಡನೇ ಸ್ಥಾನದಲ್ಲಿದೆ 

* ಕಾನೂನು ವಿಭಾಗದಲ್ಲಿ ‘ನ್ಯಾಷನಲ್‌ ಲಾ ಸ್ಕೂಲ್ ಆಫ್‌ ಇಂಡಿಯಾ ಯೂನಿವರ್ಸಿಟಿ’ಯು ಮೊದಲ ಸ್ಥಾನ ಪಡೆದುಕೊಂಡಿದೆ. ದೆಹಲಿಯ ನ್ಯಾಷನಲ್‌ ಲಾ ಯೂನಿವರ್ಸಿಟಿ ಹಾಗೂ ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್‌ ಯೂನಿವರ್ಸಿಟಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿವೆ 

* ಸಂಶೋಧನಾ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಐಐಎಸ್‌ಸಿ ಮೊದಲ ಹಾಗೂ ಐಐಟಿ ಮದ್ರಾಸ್‌ ಎರಡನೇ ಸ್ಥಾನದಲ್ಲಿವೆ

* ಮುಕ್ತ ವಿಶ್ವವಿದ್ಯಾಲಯ ವಿಭಾಗದಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿವಿ ಮೊದಲ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿ ಮೈಸೂರು ಎರಡನೇ ಸ್ಥಾನದಲ್ಲಿದೆ

ರಾಜ್ಯದ ವಿಶ್ವವಿದ್ಯಾಲಯಗಳು

ಐಐಎಸ್‌ಸಿ–1  ಎಂಎಎಚ್‌ಇ–3  ಜೆಎಸ್‌ಎಸ್‌ ಅಕಾಡೆಮಿ–21  ಜೈನ್‌ ವಿಶ್ವವಿದ್ಯಾಲಯ–62  ಕ್ರೈಸ್ಟ್‌ ವಿಶ್ವವಿದ್ಯಾಲಯ–63  ಬೆಂಗಳೂರು ವಿಶ್ವವಿದ್ಯಾಲಯ–65  ಮೈಸೂರು ವಿಶ್ವವಿದ್ಯಾಲಯ–71  ನಿಟ್ಟೆ–80  ಕೃಷಿ ವಿಶ್ವವಿದ್ಯಾಲಯ ಬೆಂಗಳೂರು–95  –––   ರಾಜ್ಯದ ಕಾಲೇಜುಗಳು  ಕ್ರಿಸ್ತ ಜಯಂತಿ ಕಾಲೇಜು ಬೆಂಗಳೂರು–34  ಎಂ.ಎಸ್. ರಾಮಯ್ಯ ಪದವಿ ಕಾಲೇಜು ಬೆಂಗಳೂರು–67  ಸೇಂಟ್‌ ಅಲೋಶಿಯಸ್‌ ಕಾಲೇಜು ಮಂಗಳೂರು–73  ಸೇಂಟ್‌ ಜೋಸೆಫ್ಸ್‌ ಕಾಮರ್ಸ್‌ ಕಾಲೇಜು ಬೆಂಗಳೂರು–98 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.