ಅಭಯ್ ಸಿಂಗ್- ಬಾಂಬೆ IITಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಸನ್ಯಾಸಿಯಾದ ಯುವಕ
ಚಿತ್ರ ಕೃಪೆ: ಎಕ್ಸ್
ನೋಯ್ಡಾ: ನಗರದ ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ನನ್ನ ಮೇಲೆ ಹಲ್ಲೆ ನಡೆಸಲಾಯಿತು ಎಂದು ಮಹಾಕುಂಭಮೇಳದಲ್ಲಿ ಜನಪ್ರಿಯತೆ ಗಳಿಸಿದ ‘ಐಐಟಿ ಬಾಬಾ’ ಅಲಿಯಾಸ್ ಅಭಯ್ ಸಿಂಗ್ ಅವರು ಆರೋಪಿಸಿದ್ದಾರೆ.
ಕೇಸರಿ ಬಟ್ಟೆ ಧರಿಸಿದ್ದ ಕೆಲವರು ಸುದ್ದಿಮನೆಯೊಳಗೆ ಬಂದು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದು, ದೊಣ್ಣೆಯಿಂದ ಹೊಡೆದಿದ್ದಾರೆ ಎಂದು ಆರೋಪಿಸಿ ಅಭಯ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದಾರೆ.
ಹಲ್ಲೆ ಖಂಡಿಸಿ ಅಭಯ್ ಸಿಂಗ್ ಅವರು ನೋಯ್ಡಾದ ಸೆಕ್ಟರ್ 126ರಲ್ಲಿನ ಪೊಲೀಸ್ ಔಟ್‌ಪೋಸ್ಟ್‌ನ ಹೊರಗೆ ಪ್ರತಿಭಟನೆ ನಡೆಸಿದ್ದರು. ಪೊಲೀಸರ ಮನವೊಲಿಕೆ ಬಳಿಕ ಅವರು ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ.
ಕುಂಭಮೇಳದಲ್ಲಿ ಗಮನ ಸೆಳೆದಿದ್ದ ‘ಐಐಟಿ ಬಾಬಾ’
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಲಕ್ಷಾಂತರ ಆಧ್ಯಾತ್ಮಿಕರು ಪಾಲ್ಗೊಂಡಿದ್ದರು. ಭಕ್ತರು, ಸಾಧು– ಸಂತರು, ನಾಗಾಸಾಧುಗಳಿಂದ ಪ್ರಯಾಗ್‌ರಾಜ್ ಕಂಗೊಳಿಸುತ್ತಿತ್ತು. ಇವರ ನಡುವೆ ಐಐಟಿ ಬಾಂಬೆನಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ಓದಿದ್ದ ಸಾಧುವೊಬ್ಬರು ‘ಐಐಟಿ ಬಾಬಾ’ ಎಂದು ತಮ್ಮನ್ನು ತಾವು ಕರೆದುಕೊಂಡು ನೆಟ್ಟಿಗರ ಗಮನ ಸೆಳೆದಿದ್ದರು.
ಅಭಯ್ ಸಿಂಗ್ ಎನ್ನುವರೇ ಈ ‘ಐಐಟಿ ಬಾಬಾ’. ಹರಿಯಾಣ ಮೂಲದ ಇವರು ತಮ್ಮ ವೃತ್ತಿ, ಲೌಕಿಕ ಬದುಕನ್ನು ಬಿಟ್ಟು ಆಧ್ಯಾತ್ಮದಲ್ಲಿ ತೊಡಗಿಕೊಂಡಿದ್ದಾರೆ. ವರದಿಗಳ ಪ್ರಕಾರ ಅಭಯ್ ಸಿಂಗ್ 2014ರಲ್ಲಿ ತಮ್ಮ ಎಂಜಿನಿಯರಿಂಗ್ ಪದವಿಯನ್ನು ಪೂರೈಸಿದ್ದಾರೆ. ಉತ್ತಮ ಸಂಬಳದ ಕೆಲಸಕ್ಕೆ ಸೇರಿದ್ದ ಅಭಯ್ ಅವರು ಕೆಲವೇ ದಿನಗಳಲ್ಲಿ ಕೆಲಸ ಬಿಟ್ಟು ಫೋಟೊಗ್ರಫಿಯನ್ನು ಮಾಡುತ್ತಿದ್ದರು. ಪ್ರವಾಸಿ ಫೋಟೊಗ್ರಫಿ ಅಭಯ್ ಅವರ ನೆಚ್ಚಿನ ಹವ್ಯಾಸವಾಗಿತ್ತು. ಕ್ರಮೇಣ ಫೋಟೊಗ್ರಫಿ ಕೋರ್ಸ್ ಮಾಡುವ ಮೂಲಕ ಅದನ್ನೇ ವೃತ್ತಿಯಾಗಿ ತೆಗೆದುಕೊಂಡಿದ್ದರು. ಈ ಅವಧಿಯಲ್ಲಿ ಜೀವನದ ಬಗೆಗಿನ ತತ್ವಶಾಸ್ತ್ರ ಬದಲಾಯಿತು ಎನ್ನುತ್ತಾರೆ ಅಭಯ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.